
ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ನಡುವಿನ ವಾಕ್ಸಮರ ಕಳೆದ ಕೆಲ ದಿನಗಳಿಂದ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಇದೀಗ ಈ ಸಂಘರ್ಷದಿಂದ ಹಿಂದೆ ಸರಿಯಲು ಹೆಚ್ಡಿಕೆ ನಿರ್ಧರಿಸಿದ್ದಾರಾ ಎಂಬ ಪ್ರಶ್ನೆ ಎದುರಾಗಿದೆ. ಈ ಮಾತಿಗೆ ಪುಷ್ಠಿ ಎಂಬಂತಹ ಪೋಸ್ಟ್ ಒಂದನ್ನ ಅವರು ಫೇಸ್ಬುಕ್ನಲ್ಲಿ ಶೇರ್ ಮಾಡಿದ್ದಾರೆ.
ಫೇಸ್ಬುಕ್ನಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಪೋಸ್ಟ್ ಶೇರ್ ಮಾಡಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ನಾವು ಹೋರಾಟ ಮಾಡಬೇಕಾದ ವಿಚಾರ ಬೇರೆಯದ್ದೇ ಇದೆ ಎಂದು ಹೇಳುವ ಮೂಲಕ ತಮ್ಮ ಗುರಿ ಈ ಸಂಘರ್ಷವಲ್ಲ ಎಂಬುದನ್ನ ಪರೋಕ್ಷವಾಗಿ ಹೇಳಿದ್ದಾರಾ ಎಂಬ ಸಂಶಯ ಮೂಡಿದೆ.
ಕನ್ನಡ, ಕನ್ನಡಿಗ, ಕರ್ನಾಟಕಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನಮಗೆ ನ್ಯಾಯ ಸಿಗಬೇಕಿದೆ. ನನ್ನ ಹೋರಾಟವನ್ನು ಈಗಾಗಲೇ ಅತ್ತ ಕೇಂದ್ರೀಕರಿಸಿದ್ದೇನೆ. ನಾಡು ನುಡಿಗಾಗಿ ಹೋರಾಡೋಣ. ಬೇರೆಲ್ಲ ವಿಷಯಗಳನ್ನು ನಾವು ಉಪೇಕ್ಷಿಸೋಣ. ಪ್ರಾದೇಶಿಕ ವಿಚಾರಗಳು ಇತ್ತೀಚೆಗೆ ಗೌಣವಾಗುತ್ತಿವೆ, ಅದರ ಬಗ್ಗೆ ಮಾತಾಡೋಣ. ಒಕ್ಕೂಟ ವ್ಯವಸ್ಥೆಯಲ್ಲಿ ನಮಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ನಾವು ದೊಡ್ಡದಾಗಿ ಕೂಗಿ ಹೇಳೋಣ. ಪ್ರಾದೇಶಿಕ ಅಸ್ಮಿತೆಯ ವಿಚಾರವನ್ನು ಜನರೊಂದಿಗೆ ಪ್ರಸ್ತಾಪಿಸೋಣ. ಆದರೆ, ಅನಗತ್ಯ ಮಾತು ಅನಗತ್ಯವಷ್ಟೆ.
ನಾವು ಸಿಡಿಯಬೇಕಾದ ಪರಿಸ್ಥಿತಿ ಇದೆ, ಸಿಡಿಯೋಣ. ಕಾವೇರಿ ಜಲದ ಯೋಜನೆಗಳಿಗೆ ತಡೆಯೊಡ್ಡುತ್ತಿರುವವರ ವಿರುದ್ಧ ಸಿಡಿಯೋಣ. ನಮ್ಮ ನೆಲದಲ್ಲಿ ನಮ್ಮ ಕನ್ನಡ ಧ್ವಜವನ್ನು ಹಾರಿಸಲು ಬಿಡಲೊಲ್ಲದ ಪಟ್ಟಭದ್ರರ ವಿರುದ್ಧ ಸಿಡಿಯೋಣ. ನಮಗೆ ನೀಡಬೇಕಾದ ಪರಿಹಾರ, ಅನುದಾನ ನೀಡದ ವ್ಯವಸ್ಥೆಯ ವಿರುದ್ಧ ಸಿಡಿಯ ಬೇಕಾಗಿದೆ ಸಿಡಿಯೋಣ. ಇದು ನಮ್ಮ ಆಯ್ಕೆಯಾಗಲಿ.
ಕೋವಿಡ್ ಕಾಲದಲ್ಲಿ ಜೆಡಿಎಸ್ ರಾಜಕೀಯ ಮಾಡಲಿಲ್ಲ. ಆದರೆ, ಜನರ ಪರ ನಿಲ್ಲುವುದನ್ನು ಮರೆಯಲಿಲ್ಲ, ಸರ್ಕಾರವನ್ನು ಎಚ್ಚರಿಸದೇ ಇರಲಿಲ್ಲ. ಕರ್ನಾಟಕ, ಕನ್ನಡಿಗರಿಗೆ ಅಪಮಾನವಾದಾಗ ಸಿಡಿಯಲು ಒಂದು ಕ್ಷಣವೂ ತಡ ಮಾಡಿಲ್ಲ. ನಾವು ರಾಜಕೀಯ ಮಾಡೋಣ, ಕರ್ನಾಟಕ ಕೇಂದ್ರಿತ ರಾಜಕಾರಣ ಮಾಡೋಣ. ನಮ್ಮ ಮೇಲಿನ ಆರೋಪಗಳನ್ನು ಜನರ ತೀರ್ಮಾನಕ್ಕೆ ಬಿಡೋಣ ಎಂಬ ಪೋಸ್ಟ್ ಶೇರ್ ಮಾಡುವ ಮೂಲಕ ಸಂಘರ್ಷಕ್ಕೆ ನಾಂದಿ ಹಾಡಲು ಯತ್ನಿಸಿದ್ದಾರಾ ಎಂಬ ಅನುಮಾನ ಮೂಡುವಂತೆ ಮಾಡಿದ್ದಾರೆ.
https://www.facebook.com/1418673848396428/posts/2917668475163617/?sfnsn=wiwspwa