ಬೆಂಗಳೂರು: ಕಾಂಗ್ರೆಸ್ ನಾಯಕರು ಚುನಾವಣೆ ಗೆಲ್ಲಲು ಮಾತೆತ್ತಿದರೆ ಜಾತಿಗೊಂದು ಡಿಸಿಎಂ ಹುದ್ದೆ ಎಂಬ ನಿಟ್ಟಿನಲ್ಲಿ ಹೇಳುತ್ತಿದ್ದಾರೆ. ಮೂರು ಶಾಸಕರಿಗೆ ನಿನ್ನೆ ಅದ್ಭುತವಾದ ಹೊಸ ಹುದ್ದೆಗಳನ್ನು ನೀಡಲಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರದ ನಡೆಯನ್ನು ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ದಾಖಲೆ ಬಜೆಟ್ ಮಂಡನೆ ಮಾಡಿರುವ ಮುಖ್ಯಮಂತ್ರಿಗಳಿಗೆ ಆರ್ಥಿಕ ಸಲಹೆಗಾರರನ್ನು ನೇಮಕ ಮಾಡಲಾಗಿದೆ. ವಿಶ್ವದ ದೊಡ್ಡ ಆರ್ಥಿಕ ತಜ್ಞರು ಅವರು. ಸರ್ಕಾರದ ಈ ತೀರ್ಮಾನಗಳು ಏನನ್ನು ಸೂಚಿಸುತ್ತವೆ? ಅದೇನು ಗಂಜಿ ಕೇಂದ್ರಗಳಾ? ಎಂದು ಟೀಕಿಸಿದ್ದಾರೆ.
25 ವರ್ಷ ಮಂತ್ರಿಯಾಗಿದ್ದ ದೇಶಪಾಂಡೆಯವರನ್ನು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಈಗ ಅವರನ್ನು ಕರೆದುಕೊಂಡು ಹೋಗಿ ಅಲ್ಲಿ ಕೂರಿಸಿ ಯಾವ ವರದಿ ತಯಾರು ಮಾಡಿಸುತ್ತೀರಿ? ವಿಜಯ ಭಾಸ್ಕರ್ ವರದಿ ಎಲ್ಲಿ ಹೋಯ್ತು? ಎಂಬುದನ್ನು ಜನರ ಮುಂದಿಡಿ. ವಿಧಾನಸೌಧದಲ್ಲಿ ಲೂಟಿ ಹೊಡೆದು ಈಗ ದೇಶಪಾಂಡೆ ಕೈಯಲ್ಲಿ ಯಾವ ವರದಿ ತಯಾರು ಮಾಡಿಸುತ್ತಾರೆ? ಎಂದು ಪ್ರಶ್ನಿಸಿದ್ದಾರೆ.
ಬಿ.ಆರ್.ಪಾಟೀಲ್ ಅವರನ್ನು ರಾಜಕೀಯ ಸಲಹೆಗಾರರನ್ನಾಗಿ ಮಾಡಿದ್ದಾರೆ. ಸಿದ್ದರಾಮಯ್ಯಗಿಂತ ಹೆಚ್ಚಿನ ರಾಜಕೀಯ ಅನುಭವ ಅವರಿಗಿದ್ಯಾ? ಸಿದ್ದರಾಮಣ್ಣ ಅವರೇ ಬಿ.ಆರ್.ಪಾಟೀಲ್ ಅವರನ್ನು ಸಲಹೆಗಾರರನ್ನಾಗಿ ಮಾಡಿಕೊಂಡಿದ್ದಕ್ಕೆ ನಿಮಗೆ ಹ್ಯಾಟ್ಸಾಪ್. ಎಲ್ಲಾ ಗುಡಿಸಿ ತೊಳೆದು ಈಗ ಆಡಳಿತ ಸುಧಾರಣೆ ಮಾಡುತ್ತಾರಂತೆ ಎಂದು ವ್ಯಂಗ್ಯವಾಡಿದರು.