
ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ದುಬಾರಿ ದುನಿಯಾ ಆರಂಭವಾಗಿದ್ದು, ಹಾಲು, ಮೊಸರು, ವಿದ್ಯುತ್ ದರ ಏರಿಕೆ ಜೊತೆಗೆ ಟೋಲ್ ದರವೂ ಹೆಚ್ಚಳವಾಗಿದೆ. ಇದರ ಜೊತೆಗೆ ಇಂದಿನಿಂದ ಕಸಕ್ಕೂ ತೆರಿಗೆ ಪಾವತಿಸಬೇಕಾದ ಹೊಸ ನಿಯಮ ಜಾರಿಯಾಗಿದೆ. ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಿನಕ್ಕೊಂದು ಸುಳ್ಳು! ತಿಂಗಳಿಗೊಂದು ದರ ಏರಿಕೆ!! ಕರ್ನಾಟಕ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ ಸರಕಾರದ ಆಡಳಿತದ ವೈಖರಿ ಇದು. ಇಂದಿನಿಂದ ಕಾಂಗ್ರೆಸ್ ಕಂಪನಿ ಸರಕಾರ ಕಸದ ಮೇಲೆಯೂ ಸೆಸ್ ವಿಧಿಸುತ್ತಿದೆ!! ಎಂದು ಕಿಡಿಕಾರಿದ್ದಾರೆ.
ನೆಪ: ಪಂಚ ಗ್ಯಾರೆಂಟಿ! ದುರುದ್ದೇಶ: ಜನರ ಲೂಟಿ!! ಮಹಮ್ಮದ್ ಘಜ್ನಿ, ಮಹಮ್ಮದ್ ಘೋರಿ ಕೂಡ ನಾಚುವಂತೆ ಕನ್ನಡಿಗರ ಮೇಲೆ ದರ ಏರಿಕೆ ದಂಡಯಾತ್ರೆ!! ದುರಾಡಳಿತದಿಂದ ಸಮೃದ್ಧ ಕರ್ನಾಟಕವನ್ನು ಬರ್ಬಾದ್ ಮಾಡಿರುವ ಕಾಂಗ್ರೆಸ್ ಕಂಪನಿ ಸರಕಾರ ದರಬೀಜಾಸುರ ರೂಪ ತಳೆದು ಜನರ ರಕ್ತ ಹೀರುತ್ತಿದೆ!
ನೀರು, ಮೆಟ್ರೋ ರೈಲು, KSRTC ಬಸ್ ಟಿಕೆಟ್, ಹಾಲು (3 ಸಲ ದರ ಏರಿಕೆ), ವಿದ್ಯುತ್, ಮುದ್ರಾಂಕ, ಮಾರ್ಗದರ್ಶಿ ಮೌಲ್ಯ, ಅಬ್ಕಾರಿ ಸುಂಕ, ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರ ರೋಗಗಳ ಶುಲ್ಕ, ಶವದ ಮರಣೋತ್ತರ ಪರೀಕ್ಷೆ ಶುಲ್ಕ, ವೈದ್ಯಕೀಯ ಪ್ರಮಾಣ ಪತ್ರದ ದರ, ಲ್ಯಾಬ್ ನಲ್ಲಿ ಪರೀಕ್ಷೆ ಶುಲ್ಕ, ವೃತ್ತಿಪರ ತೆರಿಗೆ, ಬಿತ್ತನೆ ಬೀಜಗಳ ದರವನ್ನು ಏರಿಕೆ ಮಾಡಿದೆ ದರಬೀಜಾಸುರ ಕಾಂಗ್ರೆಸ್ ಸರಕಾರ.
ಇಷ್ಟು ಸಾಲದೆಂಬಂತೆ ಜನರ ಮೇಲೆ ಇಂದಿನಿಂದ (ಏಪ್ರಿಲ್ 1ರಿಂದ) ಕಸದ ಸೆಸ್ ಹೇರುತ್ತಿದೆ ದರಬೀಜಾಸುರ ಸರಕಾರ!! ಕಸ ಹೆಸರಿನಲ್ಲಿ ಕೋಟಿ ಕೋಟಿ ಸುಲಿಗೆ ಗುರಿ ಹೊಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.