ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ-ಮುಡಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಸಿಡಿ ತಯಾರಿಕಾ ಫ್ಯಾಕ್ಟರಿ ನಿಂತಿದೆ. ಈಗ ಮುಡಾ ಫ್ಯಾಕ್ಟರಿ ಓಪನ್ ಆಗಿದೆ ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ, ಸಿಎಂ ಸಿದ್ದರಾಮಯ್ಯ ಪತ್ನಿ ಹೆಸರಿಗೆ ಅಕ್ರಮವಾಗಿ ಮುಡಾ ಸೈಟ್ ಹಂಚಿಕೆಯಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ನಮಗೆ ಸೈಟುಗಳು ಬೇಡ, ಸ್ವಾಧೀನ ಪಡಿಸಿಕೊಂಡಿರುವ ನಮ್ಮ ಜಮೀನಿಗೆ ಹಣ ನೀಡಲಿ ಎಂದು ಸುಲಭವಾಗಿ ಹೇಳಿದ್ದಾರೆ. ಆದರೆ ಸರ್ಕಾರ ತನ್ನ ಯೋಜನೆಗಳಿಗಾಗಿ ರೈತರಿಂದ ವಶಪಡಿಸಿಕೊಂಡ ಜಮೀನುಗಳ ಬಗ್ಗೆ ಯೋಚಿಸಿದೆಯಾ? ಎಂದು ಪ್ರಶ್ನಿಸಿದ್ದಾರೆ.
ಮುಡಾ ನಮಗೆ ನೀಡಿರುವ ನಿವೇಶನಗಳನ್ನು ವಾಪಾಸ್ ಪಡೆಯಲಿ. ನಮ್ಮ 3.16 ಎಕರೆ ಜಮೀನಿಗೆ ಮಾರುಕಟ್ಟೆ ಬೆಲೆಯಂತೆ 62 ಕೋಟಿ ಹಣ ನೀಡಲಿ ಎಂದು ಸಿಎಂ ಹೇಳಿದ್ದಾರೆ. ತಮ್ಮ ಜಮೀನಿಗೆ ಸಿಎಂ ಸಿದ್ದರಾಮಯ್ಯ 62 ಕೋಟಿ ಕೇಳುವ ಮೊದಲು ರೈತರು ಪಡುವ ಬವಣೆ ಬಗ್ಗೆ ಯೋಚಿಸಿದ್ದಾರಾ? ಸರ್ಕಾರದ ವಿವಿಧ ಯೋಜನೆಗಳಿಗೆ ರೈತರ ಜಮೀನು ಸ್ವಾಧೀನ ಮಾಡಿಕೊಳ್ಳಲಾಗುತ್ತದೆ. ಅವರಿಗೆ ಪರಿಹಾರ ನೀಡುವಾಗ ಮಾರುಕಟ್ಟೆ ಬೆಲೆ ಮಾನದಂಡ ಅನುಸರಿಸಲಾಗುತ್ತಿದೆಯೇ? ಅಮಾಯಕ ರೈತರು ಪರಿಹಾರ ಪಡೆಯಲು ಕೋರ್ಟು, ಕಚೇರಿ ಅಂತ ಅಲೆದಾಡುತ್ತಾ ಸಂಕಷ್ಟ ಪಡುತ್ತಿದ್ದಾರೆ. ಈ ಬಗ್ಗೆ ಸಿಎಂ ಯೋಚನೆ ಮಾಡಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.