ಬೆಂಗಳೂರು: ಸಂಸದ ಡಿ.ಕೆ.ಸುರೇಶ್ ನೀಡಿರುವ ದೇಶ ವಿಭಜನೆ ಹೇಳಿಕೆಗೆ ಮಾಜಿ ಸಿಎಂ ಹೆಚ್.ಡಿ,ಕುಮಾರಸ್ವಾಮಿ ತಿರುಗೇಟು ನೀಡಿದ್ದು, ಕಲ್ಲು ಒಡೆದುಕೊಂಡು ಇದ್ದವರನ್ನು ಲೋಕಸಭೆಗೆ ಕಳುಹಿಸಿದರೆ ಇನ್ನೇನಾಗಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಬಡವರನ್ನು ಲೂಟಿ ಮಾಡಿಕೊಂಡು ಗುಡ್ಡೆ ಹಾಕಿದ್ದಾರೆ. ಅಂತವರನ್ನು ದೇಶ ಕಟ್ಟು ಅಂತ ಕಳುಹಿಸಿದರೆ ಅವರು ದೇಶ ಕಟ್ಟುತ್ತಾರಾ? ಅವರ ಸಾಮ್ರಾಜ್ಯ ಕಟ್ಟಿಕೊಳ್ತಾರೆ ಅಷ್ಟೇ. ಇಂತವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಎಂದು ಕೇಳಿದ್ದಾರೆ.
ಡಿ.ಕೆ.ಸುರೇಶ್, ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ. ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ. ಅದಕ್ಕೆ ದೇಶ ವಿಭಜನೆ ಆಗಬೇಕು ಎಂದಿದ್ದಾರೆ. ಇದು ಅಪ್ರಬುದ್ಧ ಹೇಳಿಕೆ. ಕರ್ನಾಟಕದಲ್ಲಿ ಬಿರಿಯಾನಿ ಊಟ ಮಾಡಿ ಭಾರತ್ ಜೋಡೊ ಮಾಡಿದ್ದರು. ಈಗ ವಿಭಜನೆ ಮಾತನಾಡುತ್ತಿದ್ದಾರೆ. ಒಂದೊಮ್ಮೆ ವಿಭಜನೆ ಆದರೆ ಕಾವೇರಿ ವಿಚಾರದಲ್ಲಿ ನ್ಯಾಯ ಪಡೆಯಲು ಸಾಧ್ಯವೇ? ಕೇಂದ್ರದಿಂದ ಹಣ ಹಂಚಿಕೆ ಪ್ರಧಾನಿ ಮೋದಿ ಆರಂಭಿಸಿದ್ದಲ್ಲ. ಕಾಂಗ್ರೆಸ್ ಕಾಲದಿಂದಲೇ ಆರಂಭವಾಗಿದೆ. ಯಾವ ರಾಜ್ಯದಲ್ಲಿ ಅಭಿವೃದ್ಧಿ ಆಗಿದೆ. ಯಾವ ರಾಜ್ಯದಲ್ಲಿ ಅಬಿವೃದ್ಧಿ ಕಡಿಮೆ ಇದೆ ಎಂಬುದನ್ನು ನೋಡಿಕೊಂಡು ಹಣ ಬಿಡುಗಡೆ ಮಾಡ್ತಾರೆ. ಈ ಹಂಚಿಕೆ ಕಾಂಗ್ರೆಸ್ ಇದ್ದಾಗಲೇ ಆರಂಭವಾಗಿದ್ದು ಎಂದು ಹೇಳಿದ್ದಾರೆ.