ಬೆಂಗಳೂರು: ಗ್ಯಾರಂಟಿ ಯೋಜನೆಗಳಿಂದ ಹಳ್ಳಿ ಹೆಣ್ಣುಮಕ್ಕಳು ದಾರಿ ತಪ್ಪಿದ್ದಾರೆ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ತಮ್ಮ ಹೇಳಿಕೆ ವಿವಾದಕ್ಕೀಡಾಗುತ್ತಿದ್ದಂತೆ ಹೆಚ್.ಡಿ.ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ಖಂಡಿಸಿ ಮಂಡ್ಯದಲ್ಲಿ ಮಹಿಳೆಯರು ಗೋಬ್ಯಾಕ್ ಹೆಚ್.ಡಿ.ಕೆ ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಇಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಾಗೂ ತಾಲೂಕು ಕೇಂದ್ರಗಳಲ್ಲಿ ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ಮಹಿಳೆಯರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಅಲ್ಲದೇ ಹೆಚ್.ಡಿ.ಕುಮಾರಸ್ವಾಮಿ ದಾರಿ ತಪ್ಪಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳಾ ಆಯೋಗ ಕೂಡ ಕುಮಾರಸ್ವಾಮಿ ವಿರುದ್ಧ ದೂರು ದಾಖಲಿಸಿಕೊಂಡಿದೆ.
ಈ ಬೆಳವಣಿಗೆ ಬೆನ್ನಲ್ಲೇ ಎಚ್ಚತ್ತ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಹೌದು. ನಾನು ಕೂಡ ದಾರಿತಪ್ಪಿದ್ದೆ. ಅದನ್ನು ಈ ಹಿಂದೆಯೇ ಹೇಳಿದ್ದೇನೆ. ಸದನದಲ್ಲಿಯೇ ನಾನು ಹೇಳಿದ್ದೇನೆ. ನನ್ನ ಪತ್ನಿ ನನ್ನ ತಿದ್ದಿದ್ದಾಳೆ ಎಂದು ತಿಳಿಸಿದ್ದಾರೆ.
ನನ್ನ ಹೇಳಿಕೆಯಿಂದ ಯಾರಿಗಾದ್ರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಹೆಣ್ಣುಮಕ್ಕಳಿಗೆ ಅವಮಾನ ಮಾಡುವಂತವನು ನಾನಲ್ಲ. ಗ್ಯಾರಂಟಿಗಳಿಗೆ ಮಾರುಹೋಗಿ ದಾರಿತಪ್ಪಬೇಡಿ ಎಂದಿದ್ದೇನೆ ದಾರಿ ತಪ್ಪಬೇಡಿ ಎಂದರೆ ಅಶ್ಲೀಲ ಪದಾನಾ? ಎಂದು ಪ್ರಶ್ನಿಸಿದ್ದಾರೆ.