ಬೆಂಗಳೂರು: ಕಿಯೋನಿಕ್ಸ್ ವೆಂಡರ್ಸ್ ಗಳಿಂದ ದಯಾ ಮರಣಕ್ಕೆ ಪತ್ರ ವಿಚಾರವಾಗಿ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ.ಕುಮರಸ್ವಾಮಿ, 18 ತಿಂಗಳಲ್ಲಿ ಮಾಡಿದ ಕೆಲಸಕ್ಕೆ ಪೇಮೆಂಟ್ ಕೊಡದೇ ಹೋದರೆ ಅವರ ಬದುಕು ಏನಾಗಬೇಕು? ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಯಾರು ತಪ್ಪು ಮಾಡಿದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳಿ. ಪ್ರಿಯಾಂಕ್ ಖರ್ಗೆ, ಶರತ್ ಬಚ್ಚೇಗೌಡಗೆ ಹೇಳ್ತೀನಿ. ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳಿ. ಜನಪ್ರತಿನಿಧಿಗಳು ತಪ್ಪು ಮಾಡಿದ್ದರೆ ಅವರ ಮೇಲೂ ಕ್ರಮವಾಗಲಿ. ತನಿಖೆ ನಡೆಸಿ ವಾಸ್ತವಾಂಶ ಹೊರಗೆ ತೆಗೆಯೋಕೆ ಎಷ್ಟು ತಿಂಗಳು ಬೇಕು? ವರ್ಷಗಟ್ಟಲೇ ಬೇಕಾ? ಎಂದು ಪ್ರಶ್ನಿಸಿದರು.
ಗುತ್ತಿಗೆದಾರರೇ ಒಮ್ದು ವರ್ಷ ಕೆಲಸ ಮಾಡಬೇಡಿ. ಈ ಸರ್ಕಾರ ಸಾರ್ವಜನಿಕ ಹಣ ಲೂಟಿ ಮಾಡ್ತಿದೆ. ಗುತ್ತಿಗೆದಾರರಲ್ಲಿ ಒಗ್ಗಟ್ಟು ಇದ್ದರೆ ಒಂದು ವರ್ಷ ಗುತ್ತೆಗೆದಾರು ಯಾರೂ ಕೆಲಸ ಮಾಡಬೇಡಿ. ಈ ಸರ್ಕಾರದವರು ಆಂಧ್ರದವರನ್ನು ಯಾರನ್ನಾದರೂ ಕರೆಸುತ್ತಾರೋ? ಇಲ್ಲ ಪ್ಯಾಕೇಜ್ ಕೊಟ್ಟು ಕೆಲಸ ಮಾಡಿಸ್ತಾರೋ ನೋಡೋಣ ಎಂದು ಕರೆ ನೀಡಿದರು.
ಗುತ್ತಿಗೆದಾರರಲ್ಲಿ ನಾನು ಮನವಿ ಮಾಡುತ್ತೇನೆ. ನಿಮ್ಮಲ್ಲಿ ಒಗ್ಗಟ್ಟಿಲ್ಲದಿದ್ದರೆ, ಗುಂಪುಗಳಾದರೆ ನಿಮ್ಮನ್ನೇ ಉಪಯೋಗಿಸಿಕೊಳ್ಳುತ್ತಾರೆ. ಆಗ ನೀವೇ ಕಷ್ಟ ಅನುಭವಿಸುವುದು. ಈ ಎಲ್ಲಾ ಸಮಸ್ಯೆಗಳು ಸರಿಯಾಗಬೇಕಾದರೆ ಗುತ್ತಿಗೆದಾರರು ಯಾರೂ ಒಂದು ವರ್ಷ ಕೆಲಸ ಮಾಡಬೇಡಿ ಎಂದರು.
ದಯಾ ಮರಣಕ್ಕೆ ಯಾಕೆ ಅರ್ಜಿ ಹಾಕ್ತಿರಾ? ಆತ್ಮಹತ್ಯೆ ಯಾಕೆ ಮಾಡಿಕೊಳ್ತೀರಾ? ನಿವೇನು ತಪ್ಪು ಮಾಡಿದ್ದೀರಿ? ತಪ್ಪು ಮಾಡಿರುವುದು ಸರ್ಕಾರ. ಸರ್ಕಾರದ ವಿರುದ್ಧ ದೃಢ ನಿರ್ಧಾರ ಮಾಡಿ ಹೋರಾಟ ನಡೆಸಿ ಎಂದರು.