ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ನಮಗೆ ದುಡ್ಡು ಬೇಕೆಂದರೆ ಬೇರೆಯವರ ಬಳಿ ಕೈಚಾಚಬೇಕು. ನಮಗೆ ಬೇಕಿರುವ ಜನ ಬಂದು ದುಡ್ಡನ್ನು ಕೊಡುತ್ತಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮರಸ್ವಾಮಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕೆ, ನಾನು ಸತ್ಯಹರಿಶ್ಚಂದ್ರ ಎಂದು ಎಲ್ಲಿಯೂ ಹೇಳಿಲ್ಲ. ಇಂದಿನ ರಾಜಕಾರಣಕ್ಕೆ ದುಡ್ಡುಬೇಕು. ಆ ದುಡ್ಡನ್ನು ಚುನಾವಣೆ ಸಂದರ್ಭದಲ್ಲಿ ನಮಗೆ ಬೇಕಿರುವ ಜನ ಕೊಡುತ್ತಾರೆ. ಹಾಗೆ ಬಂದ ಹಣವನ್ನು ನಾನು ಚುನಾವಣೆಯಲ್ಲಿ ಖರ್ಚು ಮಾಡಿದ್ದೇನೆ ಎಂದರು.
ಪ್ರೀತಿ ವಿಶ್ವಾಸದಿಂದ ನಾವು ಕೆಲಸ ಮಾಡಿದಾಗ ಚುನಾವಣೆ ಸಂದರ್ಭದಲ್ಲಿ ಯಾರೋ ನಾಲ್ಕು ಜನ ಬಂದು ಹಣ ಕೊಡುತ್ತಾರೆ. ಹಾಗಂತ ಹೇಳಿ ಅಧಿಕಾರಕ್ಕೆ ಬಂದ ಬಳಿಕ ನಮ್ಮ ಸಹಿಯನ್ನು ನಾವು ಪ್ರತಿದಿನ ಮಾರಾಟಕ್ಕೆ ಇಡಲು ಆಗುತ್ತಾ? ಆ ಕೆಲಸ ನಾವೆಂದೂ ಮಾಡಿಲ್ಲ. ಆದರೆ ರಾಜ್ಯ ಸರ್ಕಾರದಲ್ಲಿ ಪ್ರತಿಯೊಂದು, ಪ್ರತಿಕ್ಷಣವೂ ಮಾರಟವೇ ನಡೆದಿದೆ ಎಂದು ವಾಗ್ದಾಳಿ ನಡೆಸಿದರು.
ಎಸ್ ಸಿ, ಎಸ್ ಟಿ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಹಣ ಕೊಟ್ಟಿಲ್ಲವಂತೆ ಅದಕ್ಕೆ ಡಿನ್ನರ್ ಪಾರ್ಟಿ ಮಾಡಿ ಚರ್ಚೆ ನಡೆಸುತ್ತಾರಂತೆ. ಹಾಗಾದರೆ ಕ್ಯಾಬಿನೆಟ್ ಇರುವುದೇಕೆ? ಎಸ್ ಸಿ,ಎಸ್ ಟಿ ಇರಲಿ ಯಾವುದೇ ವಿದ್ಯಾರ್ಥಿಗಳಿರಲಿ ಸ್ಕಾಲರ್ ಶಿಪ್ ಹಣ ಹೋಗಿಲ್ಲ ಎಂದರೆ ಅದನ್ನು ಕ್ಯಾಬಿನೇಟ್ ಮೀಟಿಂಗ್ ನಲ್ಲಿ ಚರ್ಚೆ ಮಾಡುತ್ತಿರೋ? ಇಲ್ಲಾ ಪ್ರತ್ಯೇಕ ಊಟಕ್ಕೆಂದು ಕರೆದು ಸಭೆ ಮಾಡಿ ಚರ್ಚೆ ಮಾಡ್ತಿರೋ? ಎಂದು ಸಚಿವ ಕೆ.ಎನ್.ರಾಜಣ್ಣ ಹೇಳಿಕೆಗೆ ಕಿಡಿಕಾರಿದರು.
ಕಾಂಗ್ರೆಸ್ ನಾಯಕರು ಏನಾದರೂ ಮಡಿಕೊಳ್ಳಲಿ, ಅದು ಅವರ ಪಕ್ಷಕ್ಕೆ ಸೇರಿದ ವಿಚಾರ ಎಂದು ಹೇಳಿದರು.