ಮಂಡ್ಯ: ರಾಮನಗರದ ರೀತಿಯಲ್ಲೇ ಮಂಡ್ಯ ಅಭಿವೃದ್ಧಿಗೆ ನಾನು ಅಧಿಕಾರದಲ್ಲಿದ್ದಾಗ ಹಣ ಬಿಡುಗಡೆ ಮಾಡಿದ್ದೆ. ಆದರೆ, ಬೇರೆ ಕೆಲಸಕ್ಕೆ ಹಣ ಬಳಸಿಕೊಳ್ಳುತ್ತಿದ್ದಾರೆ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ನೇರಳಕೆರೆಯಲ್ಲಿ ಅವರು ಮಾತನಾಡಿ, ನನ್ನನ್ನು ಮತ್ತೆ ಮುಖ್ಯಮಂತ್ರಿ ಮಾಡಿ. ಸಿಎಂ ಆದರೆ, ಆಡಳಿತ ನಡೆಸುವುದು ಹೇಗೆ ಎಂದು ತೋರಿಸುತ್ತೇನೆ ಎಂದು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಆಡಳಿತವನ್ನು ನೋಡಿದ್ದೀರಿ. ಅಭಿವೃದ್ಧಿ ಕೆಲಸ ಮಾಡಲು ಹಣವಿಲ್ಲವೆಂದು ಹೇಳುತ್ತಾರೆ. ಆದರೆ ಕಮಿಷನ್ ಪಡೆಯಲು ಮಾತ್ರ ಹಣ ಬರುತ್ತದೆಯೇ? ಚುನಾವಣೆ ಘೋಷಣೆಯಾಗಲಿ, ಎಲ್ಲವನ್ನು ಹೇಳುತ್ತೇನೆ ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿ 2000 ರೂ. ರೈತರ ಖಾತೆಗೆ ಹಾಕಿದರೆ ಬಿಜೆಪಿಯವರು ಅದನ್ನೇ ದೊಡ್ಡ ಸಾಧನೆ ಎನ್ನುತ್ತಾರೆ. ನಾನು ಜಿಲ್ಲೆಗೆ 9000 ಕೋಟಿ ರೂಪಾಯಿ ಅನುದಾನ ನೀಡಿದರೂ ನನ್ನ ಸರ್ಕಾರವನ್ನು ಕೆಳಗಿಳಿಸಿದರು. ನನ್ನದು ಕಮಿಷನ್ ಸರ್ಕಾರವೆಂದು ಕರೆಯಲು ಸಾಧ್ಯವೇ? ನಾನು ಕಮಿಷನ್ ಪಡೆದಿದ್ದರೆ 1000 -2000 ಕೋಟಿ ರೂಪಾಯಿ ಹಣ ಮಾಡಬಹುದಿತ್ತು ಎಂದು ಹೇಳಿದ್ದಾರೆ.
25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದೆ. ನಾನು ರೈತರಿಂದ ಕಮಿಷನ್ ಪಡೆದಿದ್ದೇನೆಯೇ ಎಂದು ಪ್ರಶ್ನಿಸಿದ್ದಾರೆ. ರೈತರ ಸಾಲ ಮನ್ನಾ ಮಾಡಿದರೆ ಏನು ಕಮಿಷನ್ ಸಿಗುವುದಿಲ್ಲ. ಹಾಗಾಗಿ ಯಾರೂ ರೈತರ ಸಾಲ ಮನ್ನಾ ಮಾಡುವುದಿಲ್ಲ. ಸಂಕ್ರಾಂತಿ ನಂತರ ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸ ಕೈಗೊಳ್ಳುತ್ತೇನೆ. ಕುಟುಂಬಕ್ಕೆ ಒಂದು ಮನೆ, ಕುಟುಂಬದ ಒಬ್ಬರಿಗೆ ಉದ್ಯೋಗ ನೀಡಬೇಕು. ಈ ಬಗ್ಗೆ ಯಾರೂ ಯೋಚನೆ ಮಾಡುವುದಿಲ್ಲ ಎಂದು ದೂರಿದ್ದಾರೆ.