ಮಂಡ್ಯ: ರಾಜ್ಯದಲ್ಲಿ ಹೊಸದಾಗಿ 50 ಲಕ್ಷ ಮನೆ ನಿರ್ಮಾಣ ಮಾಡಲಾಗುವುದು ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮುಂದಿನ ಯೋಜನೆಗಳ ಬಗ್ಗೆ ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ನೇರಳಕೆರೆ ಗ್ರಾಮದಲ್ಲಿ ಮಾತನಾಡಿದ ಅವರು, ಒಂದು ವರ್ಷದಲ್ಲಿ 50 ಲಕ್ಷ ಮನೆ ನಿರ್ಮಾಣ ಮಾಡಲಿದ್ದು, ಎರಡನೇ ವರ್ಷದಲ್ಲಿ ಪ್ರತಿ ಗ್ರಾಮ ಪಂಚಾಯಿತಿ ಮುಖ್ಯ ಕೇಂದ್ರದಲ್ಲಿ ಒಂದು ಪಬ್ಲಿಕ್ ಶಾಲೆ ಆರಂಭಿಸಲಾಗುವುದು. 5600 ಗ್ರಾಪಂ ವ್ಯಾಪ್ತಿಯಲ್ಲಿ ಸುಸಜ್ಜಿತ ಶಾಲೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸುಸಜ್ಜಿತ ಆಸ್ಪತ್ರೆಗಳನ್ನು ನಿರ್ಮಿಸಲಾಗುವುದು. ಆಸ್ಪತ್ರೆಗಳಿಗೆ ಅಗತ್ಯವಾದ ಸಿಬ್ಬಂದಿ ನೇಮಿಸಲಾಗುವುದು. ಚುನಾವಣೆ ಘೋಷಣೆಯಾಗಲಿ, ಎಲ್ಲವನ್ನು ಹೇಳುತ್ತೇನೆ ಎಂದು ಹೇಳುವ ಮೂಲಕ ಈಗಲೇ ಮುಂದಿನ ಯೋಜನೆಗಳು, ಚುನಾವಣೆಗೆ ಪ್ರಣಾಳಿಕೆ ಬಗ್ಗೆ ಮಾಹಿತಿ ನೀಡಿದ್ದಾರೆ.