ಬೆಂಗಳೂರು: ವಾಚ್ ಎಂದರೆ ಹೆಚ್ಎಂಟಿ ಎಂದು ಹೇಳುವ ಕಾಲವೊಂದಿತ್ತು. ಆದರೆ ಈಗ ಹೆಚ್ಎಂಟಿ ಕಂಪನಿ ಅಳಿವಿನಂಚಿನಲ್ಲಿದ್ದು, ರಾಜ್ಯದ ಪ್ರತಿಷ್ಠಿತ ಹಿಂದೂಸ್ತಾನ್ ಮೆಷಿನ್ ಟೂಲ್ಸ್-HMT ಕಂಪನಿ ಪುನಶ್ಚೇತನಕ್ಕೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಕಲ ಪ್ರಯತ್ನ ಮಾಡುತ್ತಿದ್ದಾರೆ.
ಗೌರಿ ಗಣೇಶ ಹಬ್ಬ ಹಿನ್ನೆಲೆಯಲ್ಲಿ ಮಾಜಿ ಸಿಎಂ, ಹೆಚ್.ಡಿ.ಕುಮಾರಸ್ವಾಮಿ ತಮ್ಮ ಮಗ ನಿಖಿಲ್ ಕುಮಾರಸ್ವಾಮಿ ಹೆಚ್ಎಂಟಿ ವಾಚ್ ಗಿಫ್ಟ್ ಕೊಟ್ಟಿದ್ದಾರೆ.
ಇದೇ ವೇಳೆ ಹೆಚ್.ಡಿ.ಕುಮಾರಸ್ವಾಮಿ, ಉಡುಗೊರೆ ನೀಡುವುದಾದರೆ ಹೆಚ್ಎಂಟಿ ವಾಚ್ ನ್ನೇ ಆಯ್ಕೆ ಮಾಡಿ ಎಂದು ರಾಜ್ಯದ ಸಂಸದರಿಗೆ ಕರೆ ನೀಡಿದ್ದಾರೆ.
ಇನ್ನು ತಂದೆ ನೀಡಿರುವ ಹೆಚ್ಎಂಟಿ ವಾಚ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ಹಂಚಿಕೊಂಡಿರುವ ನಿಖಿಲ್ ಕುಮಾರಸ್ವಾಮಿ, HMT ಕೈಗಡಿಯಾರ ಒಂದು ಕಾಲದಲ್ಲಿ ಭಾರತದ ಹೃದಯ ಬಡಿತವಾಗಿತ್ತು. ಎಲ್ಲರ ಪಾಲಿಗೂ ಅದು ನಿತ್ಯನಾಡಿಯಾಗಿತ್ತು. ನಮ್ಮ ತಲೆಮಾರಿನ ಯುವಜನರಿಗೆ HMT ವಾಚ್ ಎಂದರೆ ಅದೊಂದು ದಂತಕಥೆ. ನನ್ನ ತಂದೆ, ಹೆಚ್.ಡಿ.ಕುಮಾರಸ್ವಾಮಿ ಅವರು ಗೌರಿಹಬ್ಬದ ದಿನದಂದು HMT ಕೈಗಡಿಯಾರ ಖರೀದಿಸಿ ನನ್ನ ಕೈಗೆ ಕಟ್ಟಿದರು” ಯುವ ಜನರು ನಮ್ಮ ನಾಡಿನ ಹೆಮ್ಮೆಯ ಪ್ರತೀಕವಾದ HMT ಕೈಗಡಿಯಾರಗಳನ್ನೇ ಕಟ್ಟಬೇಕು ಎಂಬುದು ನನ್ನ ವಿನಂತಿ. ನಾನು HMT ಕೈಗಡಿಯಾರ ಕಟ್ಟಿದ್ದೇನೆ, ನೀವೂ ಕಟ್ಟಿ ಎಂದು ಮನವಿ ಮಾಡಿದ್ದಾರೆ.