ಬೆಂಗಳೂರು: ಬಿಜೆಪಿಗೆ ಲೈಫ್ ಕೊಟ್ಟಿದ್ದು ನಾನು ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ನೀಡಿದ ಹೇಳಿಕೆಗೆ ಡಿಸಿಎಂ ಅಶ್ವತ್ಥನಾರಾಯಣ ತಿರುಗೇಟು ನೀಡಿದ್ದಾರೆ.
ಆಗ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ನಮ್ಮ ಪಕ್ಷ ಬೆಂಬಲಿಸಿತ್ತು. ಅವರು ನಮ್ಮ ಜೊತೆ ಬಂದಿದ್ದರ ಬಗ್ಗೆ ಮಾತ್ರ ತೋರಿಸುತ್ತಿದ್ದಾರೆ. ಅವರಿಗೆ ಆಗಿರುವ ಲಾಭಗಳ ಬಗ್ಗೆ ಮರೆತಿದ್ದಾರೆ. ಇನ್ನೊಬ್ಬರಿಗೆ ಏನು ಸಿಕ್ಕಿದೆ ಎನ್ನುವುದನ್ನು ಕುಮಾರಸ್ವಾಮಿ ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿ ಜೊತೆ ಮೈತ್ರಿಯಿಂದ ಅವರಿಗೂ ಅನುಕೂಲ ಆಯ್ತು. ಅವರಿಗೆ ನಾವು ಬಂಗಾರದ ತಟ್ಟೆಯಲ್ಲಿ ಅಧಿಕಾರ ಕೊಟ್ಟಿದ್ದೆವು. ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳದೇ ಕಾಲಲ್ಲಿ ಒದ್ದರು. ಅದಕ್ಕೆ ನಾವೇನು ಮಾಡಲು ಆಗುವುದಿಲ್ಲ. ಅವರು ಮಾಡಿಕೊಂಡ ತಪ್ಪಿಗೆ ಅವರೇ ಉತ್ತರ ಕೊಡಬೇಕು ಎಂದು ಅಶ್ವತ್ಥನಾರಾಯಣ ಹೇಳಿದ್ದಾರೆ.
ಹಳೆಯ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡುವುದಾಗಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಕುಮಾರಸ್ವಾಮಿ ಅವರ ಬಳಿ ದಾಖಲೆಗಳಿದ್ದರೆ ಬಯಲಿಗೆ ತರಲಿ. ಇಲ್ಲದಿದ್ದರೆ ಅವರೇ ತಪ್ಪು ಮಾಡುತ್ತಿದ್ದಾರೆ ಎಂದರ್ಥವಾಗುತ್ತದೆ. ಕುಮಾರಸ್ವಾಮಿ ಅವರು ಮೊದಲು ಬ್ಲಾಕ್ಮೇಲ್ ಮಾಡುವುದನ್ನು ನಿಲ್ಲಿಸಲಿ. ಸ್ವಾರ್ಥಕ್ಕಾಗಿ ರಾಜಕಾರಣ ಮಾಡಬೇಡಿ. ಜನಹಿತಕ್ಕಾಗಿ ರಾಜಕಾರಣ ಮಾಡಿ ಎಂದು ಹೇಳಿದ್ದಾರೆ.