ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಕೆ.ಆರ್.ಎಸ್ ಜಲಾಶಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ವಿಚಾರವಾಗಿ ಲೇವಡಿ ಮಾಡಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಅವರಿಂದಲೇ ಇಂದು ಜಲಾಶಯಗಳು ತುಂಬಿ ತುಳುಕುತ್ತಿವೆ ಎಂದಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಇಂದು ಕೆ.ಆರ್.ಎಸ್.ಗೆ ಡಿಸಿಎಂ ಭೇಟಿ ಕೊಟ್ಟು ಪರಿಶೀಲಿಸಿದ್ದಾರೆ. ಅವರಿಂದಾಗಿಯೇ ರಾಜ್ಯದಲ್ಲಿ ಡ್ಯಾಂ ಗಳು ತುಂಬಿ ತುಳುಕುತ್ತಿವೆ ಎಂದು ವ್ಯಂಗ್ಯವಾಡಿದರು.
ಗಂಗಾ ಆರತಿ ರೀತಿ ಕಾವೇರಿ ಆರತಿ ಕಾರ್ಯಕ್ರಮ ಒಳ್ಳೆಯ ವಿಚಾರ. ಐದಾರು ದಿನಗಳಿಂದ ತಮಿಳುನಾಡಿಗೆ 5,6 ಟಿಎಂಸಿ ನೀರು ಹೋಗುತ್ತಿದೆ. ಜೂನ್, ಜುಲೈ ತಿಂಗಳ ಪಾಲಿಗಿಂತ ಹೆಚ್ಚು ನೀರು ಹೋಗಿದೆ ಎಂದರು.
ಕಾವೇರಿ ನದಿ ನೀರು, ಮೇಕೆದಾಟು ವಿಚಾರವಾಗಿ ತಮಿಳುನಾಡು ಸಿಎಂ ಕರ್ನಾಟಕದ ಬಗೆಗಿನ ನಡವಳಿಕೆ ತಿದ್ದುಕೊಳ್ಳಲಿ. ಕರ್ನಾಟಕ ತಮಿಳುನಾಡಿಗೆ ಯಾವತ್ತು ಸಮಸ್ಯೆ ಮಾಡಿಲ್ಲ. ನೀರು ಬಳಕೆ ದೃಷ್ಟಿಯಿಂದ ಮೇಕೆದಾಟು ಯೋಜನೆಗೆ ತಮಿಳುನಾಡು ಒಪ್ಪಬೇಕು ಎಂದು ಹೇಳಿದರು.