ರಾಮನಗರ: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ವಿಪಕ್ಷ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಎರಡನೇ ದಿನ ಮುಂದುವರೆದಿದ್ದು, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಸಾಲು ಸಾಲು ಗಂಭೀರ ಆರೋಪ ಮಾಡಿದ್ದಾರೆ.
ಪಾದಯಾತ್ರೆ ವೇಳೆ ಜನರನ್ನು ಉದ್ದೇಶಿಸಿ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಹೆಣ್ಣುಮಗಳನ್ನು ಕಿಡ್ನ್ಯಾಪ್ ಮಾಡಿ ಸೈಟು ಬರೆಸಿಕೊಂಡಿದ್ದಾರೆ. ಪ್ರಶ್ನೆ ಮಾಡಿದ್ದಕ್ಕೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಅಲ್ಲದೇ ದಲಿತರಿಗೆ ಸೇರಬೇಕಾದ 68 ಎಕರೆ ಜಮೀನನ್ನು ಡಿಸಿಎಂ ಲಪಟಾಯಿಸಿದ್ದಾರೆ. ಅಸಲಿ ಸೊಸೈಟಿ ನಕಲಿ ಮಾಡಿ ದಲಿತರ ಭೂಮಿ ಲಪಟಾಯಿಸಿದ್ದಾರೆ. ನಾನು ಯಾವುದೇ ವಂಚನೆ ಮಾಡಿಲ್ಲ, ಭೂಮಿಯನ್ನೂ ಲಪಟಾಯಿಸಿಲ್ಲ. ನಾನು ಸಿನಿಮಾ ವಿತರಕನಾಗಿದ್ದಾಗ ಜಮೀನು ಖರೀದಿಸಿದ್ದೆ. ನಾನು ವಂಚನೆ ಮಾಡಿ ಭೂಮಿ ಖರೀದಿಸಿದ್ದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಹೇಳಿದರು.
ಹೆಣ್ಣುಮಗಳನ್ನು ಕಿಡ್ನ್ಯಾಪ್ ಮಾಡಿ ಬೆದರಿಕೆ ಹಾಕಿದ್ದು ಇವರು. ಹೆಣ್ಣುಗಳನ್ನು ಅಪಹರಿಸಿ ಬೆದರಿಸಿ, ಅವರಪ್ಪನಿಂದ ಸದಾಶಿವನಗರದಲ್ಲಿ ಸೈಟು ಬರೆಸಿಕೊಂಡರು. ನಾನು ಡಿ.ಕೆ.ಶಿವಕುಮಾರ್ ಅವರಿಂದ ಹೇಳಿಕೊಳ್ಳಬೇಕಿಲ್ಲ. ವಂಚನೆ ಮಾಡಿರುವುದು ಅವರು ನಾವಲ್ಲ ಎಂದರು.
ಇನ್ನು ಸಿಎಂ ಸಿದ್ದರಾಮಯ್ಯ ತಮ್ಮ ಪತ್ನಿ ಹೆಸರಲ್ಲಿ 14 ಸೈಟು ಪಡೆಯಲು ನಮ್ಮ ವಿರೋಧವಿಲ್ಲ. ಆದರೆ ಅಧಿಕಾರ ದುರುಪಯೋಗ ಪಡಿಸಿಕೊಂಡು ಸೈಟು ಪಡೆದಿದ್ದಾರೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಸೈಟು ಪಡೆದಿದ್ದಾರೆ. ಸರ್ಕಾರದ ಆಸ್ತಿ ಕಬಳಿಸಿದ್ದಾರೆ. ಈ ಬಗ್ಗೆ ಸದನದಲ್ಲೇ ದಾಖಲೆ ಮುಂದಿಟ್ಟಿದ್ದೇವೆ. ಕಾಂಗ್ರೆಸ್ ನಾಯಕರು ಉತ್ತರ ನೀಡದೇ ಪಲಾಯನ ಮಾಡಿದ್ದಾರೆ ಎಂದು ಕಿಡಿಕಾರಿದರು.