ಬೆಂಗಳೂರು: ಮುಡಾ ಹಗರಣ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಆರಂಭವಾಗಿದೆ. ಪಾದಯಾತ್ರೆಯಲ್ಲಿ ಮೈಸೂರು ಚಲೋ ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್ ನಿಂದ ಜನಾಂದೋಲನ ಸಮಾವೇಶ ಆರಂಭವಾಗಿದೆ. ನಿನ್ನೆ ಸಮಾವೇಶದಲ್ಲಿ ಜೈಲಿಗೆ ಹೋಗಲು ಸಿದ್ಧ ಎಂದು ಅವರೇ ಹೇಳಿಕೊಂಡಿದ್ದಾರೆ. ರಾಜಕಾರಣಕ್ಕೆ ಬರುವ ಮುನ್ನ ಅವರ ಆಸ್ತಿ ಏನಿತ್ತು ಎಂಬುದನ್ನು ಅವರ ಗುರುಗಳು ಸೋಷಿಯಲ್ ಮೀಡಿಯಾಗಳಲ್ಲಿ ಹೇಳಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೆಸರು ಪ್ರಸ್ತಾಪಿಸದೇ ವಾಗ್ದಾಳಿ ನಡೆಸಿದ್ದಾರೆ.
ಬ್ಲಾಕ್ ಆಂಡ್ ಟಿವಿ, ಡಿವಿಡಿ ಇಟ್ಟುಕೊಂಡು ದೊಡ್ಡಾಲಹಳ್ಳಿ ಹಾಗೂ ಕೋಡಿಹಳ್ಳಿಯಲ್ಲಿ ಏನು ಪ್ರದರ್ಶನ ಮಾಡುತ್ತಿದ್ದರು? ಅದರಿಂದ ಏನು ಹಣ ಸಂಪಾದನೆ ಮಾಡುತ್ತಿದ್ದರು ಎಂಬುದಾಗಿ ಹೇಳಿದ್ದಾರೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ-ಜೆಡಿಎಸ್ ಪಾದಯಾತ್ರೆಯಲ್ಲಿ ಕೇವಲ ಎರಡು ಪಕ್ಷಗಳ ಕಾರ್ಯಕರ್ತರು ಮಾತ್ರವಿಲ್ಲ, ಇಡೀ ನಾಡಿನ ಜನರ ಅಭಿಪ್ರಾಯವೇ ಇಲ್ಲಿದೆ. ಕಾಂಗ್ರೆಸ್ ನಾಯಕರು ನಿನ್ನೆ ಬಿಡದಿಯಲ್ಲಿ ಕೇಳಿದ ಹಲವು ಪ್ರಶ್ನೆಗಳಿಗೆ ಬಿಡದಿ, ರಾಮನಗರದಲ್ಲಿ ಉತ್ತರ ಕೊಡುತ್ತೇನೆ ಎಂದು ಹೇಳಿದರು.