ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಬಿಡದಿ ಬಳಿಯ ತೋಟದ ಮನೆಯಲ್ಲಿ ಭೂಜನ ಕೂಟ ಆಯೋಜನೆ ಬೆನ್ನಲ್ಲೇ ಕಾಂಗ್ರೆಸ್ ಚುನಾವಣಾ ಆಮಿಷ. ಭೂಜನ ಕೂಟದ ಜೊತೆ ಮದ್ಯದ ವಾಸನೆಯೂ ಹೊರ ಬರುತ್ತಿದೆ ಎಂದು ಆರೋಪ ಮಾಡಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಚುನಾವಣಾ ಅಧಿಕಾರಿಗಳು ಹೆಚ್.ಡಿ.ಕೆ ತೋಟದ ಮನೆ ಮೇಲೆ ದಾಳಿ ನಡೆಸಿ ಪರಿಶೀಲಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ ಚುನಾವಣಾ ಅಧಿಕಾರಿಗಳಿಗೆ ನಮ್ಮ ತೋಟದ ಮನೆಯಲ್ಲಿ ಏನೂ ಸಿಕ್ಕಿಲ್ಲ. ಕಾಂಗ್ರೆಸ್ ನಾಯಕರು ಅನಗತ್ಯ ಆರೋಪ ಮಾಡುತ್ತಿದ್ದಾರೆ. ತಹಶೀಲ್ದಾರ್ ಗೆ ಪದೇ ಪದೇ ಕರೆ ಮಾಡಿ ಒತ್ತಡ ಹೇರಿದ್ದಾರಾಂತೆ. ಹಾಗಾಗಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮನೆಯಲ್ಲಿ ಏನೂ ಸಿಕ್ಕಿಲ್ಲ ವಾಪಾಸ್ ಆಗಿದ್ದಾರೆ ಎಂದಿದ್ದಾರೆ.
ಬಿಡದಿ ತೋಟದ ಮನೆಯಲ್ಲಿ ಕೆಲಸಗಾರರಿಗಾಗಿ ಊಟದ ವ್ಯವಸ್ಥೆ ಮಾಡಲಾಗಿತ್ತು. 120 ಜನ ಕೆಲಸದವರಿದ್ದಾರೆ. ಅವರಿಗೆಂದು ಊಟ ವ್ಯವಸ್ಥೆ ಮಾಡಿದ್ದೆವು. ನಾನು ಬಿಡದಿ ತೋಟದ ಮನೆಗೆ ಹೋಗುವುದಿಲ್ಲ. ಎಷ್ಟು ಚುನಾವಣೆ ಮಾಡಿದ್ದೇನೆ. ಏನು ಮಾಡಬೇಕು ಎಂದು ನನಗೆ ಗೊತ್ತಿಲ್ಲವೇ? ಊಟದ ಜೊತೆ ಗ್ಲಾಸ್ ಇಡುವುದು ಕಾಂಗ್ರೆಸ್ ಸಂಸ್ಕೃತಿ ಎಂದು ಟಾಂಗ್ ನೀಡಿದ್ದಾರೆ.