ಹಾಸನ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಹಾಸನ ಜಿಲ್ಲೆಯಲ್ಲಿ ತಾಲೂಕುವಾರು ಸಭೆಗಳನ್ನು ನಡೆಸಿದ್ದಾರೆ.
ಸಭೆ ಬಳಿಕ ಮಾತನಾಡಿರುವ ಮಾಜಿ ಪ್ರಧಾನಿ ದೇವೇಗೌಡರು, ಬಿಜೆಪಿ-ಜೆಡಿಎಸ್ ಸೀಟು ಹಂಚಿಕೆ ಇನ್ನೂ ಆಗಿಲ್ಲ. ಆದರೆ ಹಾಸನದಲ್ಲಿ ಹಾಲಿ ಸದಸ್ಯರು ನಮ್ಮವರೇ ಇದ್ದಾರೆ. ಹಾಗಾಗಿ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲ ಎಂದರು.
ಇನ್ನು ಮಾಜಿ ಸಿಎಂ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಏನು ಹೇಲುತ್ತಾರೆ ಗೊತ್ತಿಲ್ಲ. ಅವರು ಸ್ಪರ್ಧಿಸಲೇಬೇಕು ಎಂದು ಸೂಚಿಸಿದರೆ ಮಂಡ್ಯ ಅಥವಾ ತುಮಕೂರಿನಿಂದ ಸ್ಪರ್ಧಿಸಬಹುದು ಎಂದರು.
ಕುಮಾರಸ್ವಾಮಿಯವರಿಗೆ ಸಾಕಷ್ಟು ಜನರು ಆಹ್ವಾನ ನೀಡುತ್ತಿದ್ದಾರೆ. ಆದರೆ ಅವರು ಎಲ್ಲಿಂದ ಸ್ಪರ್ಧೆ ಮಾಡಬೇಕು ಎಂಬುದನ್ನು ತೀರ್ಮಾನಿಸುವುದು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಎಂದು ಹೇಳಿದರು.
ಇನ್ನು ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ವಿಚಾರವಾಗಿ ಮಾತನಾಡಿದ ದೇವೇಗೌಡರು, ನಿಖಿಲ್ ಈಬಾರಿ ಸ್ಪರ್ಧಿಸಲ್ಲ ಎನ್ನುವುದು ಕುಮಾರಸ್ವಾಮಿ ಅಭಿಪ್ರಾಯ. ಆದರೆ ಮಂಡ್ಯದಲ್ಲಿ ಈಬಾರಿ ನಿಖಿಲ್ ಸ್ಪರ್ಧಿಸಲಿ ಎಂಬುದು ಹಲವರ ಒತ್ತಾಯ. ಕುಮಾರಸ್ವಾಮಿ ಒಪ್ಪಿದರೆ ನಿಖಿಲ್ ಸ್ಪರ್ಧೆ ಮಾಡ್ತಾರೆ ಎಂದು ಹೇಳಿದರು.