ಬೆಂಗಳೂರು: ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ. ಕಾಂಗ್ರೆಸ್ ಸರಕಾರ ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಕಿಡಿಕಾರಿದ್ದಾರೆ.
ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡ, ಸಿಎಂ ಸಿದ್ದರಾಮಯ್ಯ ಎಲ್ಲೆಡೆ ಗ್ಯಾರಂಟಿ ಯೋಜನೆ ಕೊಟ್ಟಿದ್ದೇವೆ. ಸಾಧನೆ ಮಾಡಿದ್ದೇವೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ರಾಜ್ಯದಲ್ಲಿ 692 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಸಿದ್ದರಾಮಯ್ಯ ಸಾಧನೆಯ ಕಿರುನೋಟ ಎಂದು ವಾಗ್ದಾಳಿ ನಡೆಸಿದರು.
ರಾಜಧಾನಿ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕಾವೇರಿ ನೀರಿಗಾಗಿ ಹೋರಾಟ ನಡೆಸಿ ಹೇಮಾವತಿ, ಕಬಿನಿ, ಹಾರಂಗಿ ಅಣೆಕಟ್ಟು ಕಟ್ಟಿಸಿದವನು ನಿಮ್ಮ ಮುಂದೆ ಕೂತಿದ್ದೇನೆ. ಹೇಮಾವತಿಯಲ್ಲಿ ನೀರಿದೆ. ಅಲ್ಲಿನ ಹಳ್ಳಿಗಳಿಗೂ ಆ ನೀರು ಕೊಡಿ, ಬೆಂಗಳೂರಿಗೂ ನೀರು ಕೊಡಿ. ಕೆ.ಆರ್.ಎಸ್ ನಲ್ಲಿ 90 ಅಡಿಗೆ ಬಂದಿದೆ. ಹೇಮಾವತಿಯಲ್ಲಿ 23 ಟಿಎಂಸಿ ನೀರಿದೆ. ಜನರಿಗೆ ನೀರು ಕೊಡಲು ನಿಮಗೆ ಸಮಸ್ಯೆ ಏನು? ಎಂದು ಪ್ರಶ್ನಿಸಿದರು.
ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎಷ್ಟು ದಿನಗಳಿಂದ ಎದುರಾಗಿದೆ. ಡಿಸಿಎಂ, ನೀರಾವರಿ ಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್ ಎಷ್ಟು ದಿನ ಏನು ಮಾಡಿದಿರಿ? ಒಂದು ಟ್ಯಾಂಕರ್ ನೀರಿಗೆ 2500 ರಿಂದ 3,000 ಕೊಡಬೇಕು. 10 ತಿಂಗಳಲ್ಲಿ ನೀವು ಎಷ್ಟು ಕಡೆ ಪ್ರವಾಸ ಮಾಡಿದ್ದೀರಾ? 20 ದಿನ ಅಧಿವೇಶನ, ಸಭೆ, ಮಂತ್ರಿಗಳ ಮನೆ ಊಟಕ್ಕೆ 4 ದಿನ ಕಳೆದಿರಿ. ಬಾಕಿ ದಿನ ಏನು ಮಾಡಿದಿರಿ ನೀವು? ಗ್ಯಾರಂಟಿ ಯೋಜನೆ ಉಸ್ತುವಾರಿಗೆ ಮಾಜಿ ಮಂತ್ರಿಗಳ ನೇತೃತ್ವದಲ್ಲಿ ಸಮಿತಿ ಮಾಡಿದ್ದೀರಿ. 95 ಜನರಿಗೆ ಕ್ಯಾಬಿನೆಟ್ ದರ್ಜೆ… ಎಂತಹ ಆಡಳಿತ? ಎಂದು ತರಾಟೆಗೆ ತೆಗೆದುಕೊಂಡರು.