ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ರೇವಣ್ಣ ಪ್ರಕರಣದ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ ಅದರ ಬಗ್ಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ ಎಂದರು.
ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣ ವಿಚಾರವಾಗಿ ಮಾತನಾಡಿದ ದೇವೇಗೌಡ, ಹಾಸನ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಹೊರಗಡೆ ಹೋಗಿದ್ದಾರೆ. ಈ ಘಟನೆ ಬಗ್ಗೆ ಕುಟುಂಬದ ಪರವಾಗಿ ಹೆಚ್.ಡಿ.ಕೆ ಮಾತನಾಡಿದ್ದಾರೆ. ಕ್ರಮ ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿ. ಇದರಲ್ಲಿ ಅನೇಕ ಜನರಿದ್ದಾರೆ. ಅವರ ಹೆಸರನ್ನು ಹೇಳಲು ಹೋಗುವುದಿಲ್ಲ. ಅನ್ಯಾಯಕ್ಕೆ ಒಳಗಾಗಿರುವ ಸಂತ್ರಸ್ತೆಯರಿಗೆ ನ್ಯಾಯ, ಪರಿಹಾರ ನೀಡಬೇಕು ಎಂದು ಹೇಳಿದರು.
ಈ ಎಲ್ಲಾ ವಿಚಾರಗಳನ್ನು ಕುಮಾರಸ್ವಾಮಿ ಬಿಡಿಸಿ, ಬಿಡಿಸಿ ಹೇಳಿದ್ದಾರೆ. ಇದು ಯಾವ ರೀತಿ ನಡೆಯಿತು ಎಂದು ನಾನು ವಿಶ್ಲೇಷಣೆ ಮಾಡಲ್ಲ ಎಂದರು.
ಇದೇ ವೇಳೆ ಡಿ.ಕೆ.ಶಿವಕುಮಾರ್ 100 ಕೋಟಿ ಆಫರ್ ಮಾಡಿದ್ರು ಎಂಬ ದೇವೇರಾಜೇಗೌಡ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ. ದೇವರಾಜೇಗೌಡ ಏನು ಹೇಳಿದ್ದಾನೆ ಎಂದು ಮಾಧ್ಯಮದಲ್ಲಿ ನೋಡಿದ್ದೇನೆ. ಎಲ್ಲದಕ್ಕೂ ಕುಮಾರಸ್ವಾಮಿ ಉತ್ತರ ಕೊಟ್ಟಿದ್ದಾರೆ. ಯಾವುದೇ ವಿಚಾರ ಬಂದ್ರೂ ಹೋರಾಟ ಮಡುವ ಛಲವಿದೆ. ಎಂಪಿ ಚುನಾವಣೆಯಲ್ಲಿ ಎಲ್ಲಾ ಕಡೆ ನಾನು ಪ್ರಚಾರ ಮಾಡಿದ್ದೇನೆ. ಚುನಾವಣಾ ಫಲಿತಾಂಶದ ಬಳಿಕ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ತಿಳಿಸಿದರು.