ಚಿಕ್ಕಮಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನಡುವಿನ ಆರೋಪ ಪ್ರತ್ಯಾರೋಪ ಮುಂದುವರೆದಿದೆ. ಇದೀಗ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಡಿ.ಕೆ.ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಡಿ.ದೇವೇಗೌಡ, ಡಿ.ಕೆ.ಶಿವಕುಮಾರ್ ತುಂಡು ಭೂಮಿಗಾಗಿ ಮಗುವನ್ನು ಅಪಹರಿಸಿ ಜಮೀನು ಬರೆಸಿಕೊಂಡಿದ್ದಾರೆ ಎಂದಿದ್ದಾರೆ.
ಅಮೇರಿಕದಲ್ಲಿ ಹಣ ಸಂಪಾದಿಸಿ ಸ್ವದೇಶಕ್ಕೆ ಬಂದ ವ್ಯಕ್ತಿಯೊಬ್ಬ ಬಿಡದಿ ಬಳಿ ಒಂದು ಐಟಿ ಕಂಪನಿ ಸ್ಥಪಿಸಲು ಜಮೀನು ಖರೀದಿಸುತ್ತಾರೆ. ಆದರೆ ಶಿವಕುಮಾರ್ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಆ ಜಮೀನು ಕಬಳಿಸಲು ಯತ್ನಿಸುತ್ತಾರೆ. ಈ ವೇಳೆ ಆ ವ್ಯಕ್ತಿ ಕೋರ್ಟ್ ಮೊರೆ ಹೋಗುತ್ತಾರೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಎರಡರಲ್ಲಿಯು ಡಿ.ಕೆ.ಶಿವಕುಮಾರ್ ಗೆ ಸೋಲಾಗುತ್ತದೆ. ಆ ಜಮೀನನ್ನು ಪಡೆಯಲೇಬೇಕೆಂಬ ಹಠಕ್ಕೆ ಬಿದ್ದ ಶಿವಕುಮಾರ್ ಆ ವ್ಯಕ್ತಿಯ 9 ವರ್ಷದ ಬಾಲಕಿಯನ್ನು ಕಿಡ್ನ್ಯಾಪ್ ಮಾಡಿ ಮನೆಯೊಂದರಲ್ಲಿ ಕೂಡಿ ಹಾಕುತ್ತಾರೆ. ನಮಗೆ ಆ ಜಮೀನು ಸಾಹಸವೇ ಬೇಡ ಎಂದು ಆ ವ್ಯಕ್ತಿಯ ಪತ್ನಿ ಗಂಡನಿಗೆ ಹೇಳಿ ಮಗು ಕರೆದುಕೊಂಡು ಬರುವಂತೆ ಒತ್ತಾಯಿಸುತ್ತಾಳೆ.
ಪತ್ನಿ ಮಾತಿನಂತೆ ಮಗು ಕರೆದುಕೊಂಡು ಬರಲೆಂದು ಆತ ಹೋದಾಗ ಆತನಿಗೆ ಹಾಗೂ ಮಗುವಿಗೆ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ. ಮಗು ಅಪ್ಪನನ್ನು ಕಂಡು ಅಪ್ಪ ಎಂದು ಓಡಿ ಬರಲು ಮುಂದಾದಾಗ ಮಗುವಿನ ಬಾಯಿ ಕಟ್ಟಿ ಎಳೆದೊಯ್ದಿದ್ದಾರೆ. ಈ ರೀತಿ ಹಿಂಸೆ ನೀಡಿ ಜಮೀನು ಬರೆಸಿಕೊಂಡಿದ್ದಾರೆ. ಈ ಬಗ್ಗೆ ನನ್ನ ಬಳಿ ದಾಖಲೆಗಳಿವೆ ಎಂದು ದೇವೇಗೌಡರು ತಿಳಿಸಿದ್ದಾರೆ.