ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡೇ ನೀಡ್ತಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆಗೆ ಸಚಿವ ಹೆಚ್.ಸಿ.ಮಹದೇವಪ್ಪ ಪ್ರತಿಕ್ರಿಯೆ ನೀಡಿದ್ದು, ಅವರು ಹೇಳ್ತಾರೆ ಎಂದು ರಾಜೀನಾಮೆ ಕೊಡಬೇಕಾ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಹೆಚ್.ಸಿ.ಮಹದೇವಪ್ಪ, ರಾಜೀನಾಮೆ ಕೊಡೋದಿಕ್ಕಾ ಸಿದ್ದರಾಮಯ್ಯ ಅವರನ್ನು ಜನ ಆಯ್ಕೆ ಮಾಡಿರೋದು? 136 ಶಾಸಕರನ್ನು ಆಯ್ಕೆ ಮಾಡಿದ್ದು ಬಿಜೆಪಿಯವರು ಹೇಳಿದಂತೆ ರಾಜೀನಾಮೆ ಕೊಡೋದಿಕ್ಕಲ್ಲ ಎಂದು ತಿರುಗೇಟು ನೀಡಿದ್ದಾರೆ.
ಬಿ.ವೈ.ವಿಜಯೇಂದ್ರ, ಬಿ.ಎಸ್.ಯಡಿಯೂರಪ್ಪ, ಆರ್.ಅಶೋಕ್, ಹೆಚ್.ಡಿ.ಕೆ, ಜನಾರ್ಧನ ರೆಡ್ಡಿ, ನಿರಾಣಿ, ಶಶಿಕಲಾ ಜೊಲ್ಲೆ ಮೇಲೆ ಸಾಕಷ್ಟು ಕೇಸ್ ಗಳಿವೆ. ಬಿಜೆಪಿ ನಾಯಕರು ಮೊದಲು ತಮ್ಮದೆಲ್ಲವನ್ನೂ ಶುದ್ಧಿ ಮಾಡಿಕೊಳ್ಳಲಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಶಾಸಕರು, ಮಂತ್ರಿಗಳು, ಹೈಕಮಾಂಡ್ ನಾಯಕರು ಸಿಎಂ ಪರ ಇದ್ದಾರೆ. ಸಿಎಂ ಸಿದ್ದರಾಮಯ್ಯ ಯಾವುದೇತಪ್ಪು ಮಾಡಿಲ್ಲ. ಅವರು ಪ್ರಾಮಾಣಿಕ ರಾಜಕಾರಣಿ. ರಾಜ್ಯ ಬಿಜೆಪಿ ನಾಯಕರು ಹಾಗೂ ಕೇಂದ್ರ ನಾಯಕರು ಸಿಎಂ ವಿರುದ್ಧ ಷಡ್ಯಂತ್ರ ರೂಪಿಸಿ ಪಿತೂರಿ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.