ಇತ್ತೀಚೆಗಷ್ಟೇ ಮೀರತ್ ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿತ್ತು. ಪತ್ನಿಯೊಬ್ಬಳು ಪ್ರಿಯಕರನೊಂದಿಗೆ ಸೇರಿ ತನ್ನ ಗಂಡನನ್ನು ತುಂಡು ತುಂಡಾಗಿ ಕತ್ತರಿಸಿ ಡ್ರಮ್ ನಲ್ಲಿ ಅಡಗಿಸಿಟ್ಟಿದ್ದಳು. ಇದರ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ಕೃತ್ಯ ಬಹಿರಂಗವಾಗಿದೆ. ಗ್ವಾಲಿಯರ್‌ನ ಝಾನ್ಸಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ನಿ ತನ್ನ ಪ್ರಿಯಕರನ ಸಹಾಯದಿಂದ ಪತಿಯ ಮೇಲೆ ಕಾರು ಹರಿಸಿ ಕೊಲೆ ಮಾಡಲು ಯತ್ನಿಸಿದ ಶಾಕಿಂಗ್ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆಯ ಸಿಸಿ ಟಿವಿ ದೃಶ್ಯಾವಳಿಗಳು ಲಭ್ಯವಿದ್ದರೂ, ಪೊಲೀಸರು ಈ ಪ್ರಕರಣವನ್ನು ಸಾಮಾನ್ಯ ಅಪಘಾತ ಎಂದು ದಾಖಲಿಸಿದ್ದಾರೆ. ಸಂತ್ರಸ್ತ ಇದೀಗ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ತಾರಾಗಂಜ್ ನಿವಾಸಿ ಸುನಿಲ್ ಪಾಲ್ ಪ್ರಕಾರ, ಅವರ ಪತ್ನಿ ಕಳೆದ 12 ವರ್ಷಗಳಿಂದ ಮಂಗಲ್ ಸಿಂಗ್ ಕುಶ್ವಾಹ ಎಂಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾರೆ. ಹಲವಾರು ಬಾರಿ ವಿಡಿಯೋ ಕರೆಗಳು ಮತ್ತು ವಾಟ್ಸಾಪ್ ಚಾಟ್‌ಗಳಲ್ಲಿ ಅವರು ಮಾತನಾಡುತ್ತಿರುವುದನ್ನು ತಾನು ನೋಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಮಾರ್ಚ್ 20 ರಂದು, ಹೊಟ್ಟೆ ನೋವಿನ ನೆಪ ಹೇಳಿ ಅವರ ಪತ್ನಿ ಮನೆಯಿಂದ ಹೊರಟರು. ಅವರ ವರ್ತನೆಯ ಬಗ್ಗೆ ಅನುಮಾನಗೊಂಡ ಸುನಿಲ್ ಅವರನ್ನು ಹಿಂಬಾಲಿಸಿದ್ದು, ಮಂಗಲ್ ಸಿಂಗ್‌ನ ಕಾರಿನಲ್ಲಿ ಕುಳಿತಿರುವುದನ್ನು ನೋಡಿದ್ದಾರೆ. ಅವರು ವಾಹನವನ್ನು ತಡೆಯಲು ಪ್ರಯತ್ನಿಸಿದಾಗ, ಮಂಗಲ್ ಅವರ ಮೇಲೆ ಕಾರು ಹರಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದು, ಆದರೆ ಅವರು ಸ್ವಲ್ಪದರಲ್ಲೇ ಪಾರಾದರು.
“ನಾನು ಝಾನ್ಸಿ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ, ಆದರೆ ಅವರು ಇದನ್ನು ಕೊಲೆ ಯತ್ನ ಪ್ರಕರಣವೆಂದು ಪರಿಗಣಿಸುವ ಬದಲು ರಸ್ತೆ ಅಪಘಾತ ಎಂದು ದಾಖಲಿಸಿದ್ದಾರೆ. ಇದು ಸ್ಪಷ್ಟವಾಗಿ ಕೊಲೆ ಯತ್ನವಾಗಿದೆ ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಪಾಲ್ ಹೇಳಿದರು.
ಈ ವಿಷಯದ ಬಗ್ಗೆ, ಸಿಎಸ್‌ಪಿ ಹೆಡ್‌ಕ್ವಾರ್ಟರ್ಸ್ ರಾಬಿನ್ ಜೈನ್, “ಝಾನ್ಸಿ ರಸ್ತೆ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ. ಪತ್ನಿಯ ಪ್ರಿಯಕರ ಕಾರಿನಿಂದ ಪತಿಗೆ ಗಾಯಗೊಳಿಸಿದ್ದಾನೆ ಎಂಬುದು ಆರೋಪ. ನಾವು ಆರೋಪಿಯ ಹೇಳಿಕೆಯನ್ನು ದಾಖಲಿಸುತ್ತೇವೆ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತೇವೆ ಮತ್ತು ಸಾಕ್ಷ್ಯಗಳ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಹೇಳಿದ್ದಾರೆ.