ಸೈಕ್ಲಿಂಗ್ ಅನ್ನು ಜೀವನಶೈಲಿಯ ಭಾಗವನ್ನಾಗಿ ಮಾಡಿಕೊಂಡು, ಪರ್ಯಾವರಣ ಸಂರಕ್ಷಣೆಯೊಂದಿಗೆ ಫಿಟ್ ಆಗಿರಲು ಉತ್ತೇಜನ ನೀಡುವ ಉದ್ದೇಶದಿಂದ ಎರಡು ವರ್ಷಗಳ ಹಿಂದೆ ಆರಂಭಗೊಂಡ ಗೌಹಾಟಿ ಸೈಕ್ಲಿಂಗ್ ಸಮುದಾಯ ಇದೀಗ ಕೋವಿಡ್ ಸಾಂಕ್ರಮಿಕದ ಕಾಲಘಟ್ಟದಲ್ಲಿ ಸಂಕಷ್ಟದಲ್ಲಿರುವ ಮಂದಿಯ ನೆರವಿಗೆ ನಿಂತಿದೆ.
’ರಿಲೀಫ್ ರೈಡರ್ಸ್’ ಎಂಬ ಹೊಸ ಅಭಿಯಾನಕ್ಕೆ ಚಾಲನೆ ಕೊಟ್ಟಿರುವ ಗೌಹಾಟಿ ಸೈಕ್ಲಿಂಗ್ ಸಮುದಾಯ ಕೋವಿಡ್ ರೋಗಿಗಳು, ಅನಾರೋಗ್ಯಪೀಡಿತರು ಹಾಗೂ ಹಿರಿಯ ನಾಗರಿಕರಿಗೆ ಅಗತ್ಯ ವಸ್ತುಗಳನ್ನು ತಲುಪಿಸಲು ಯತ್ನಿಸುತ್ತಿದೆ.
ಆಹಾರ, ಔಷಧ ಸೇರಿದಂತೆ ಅತ್ಯಗತ್ಯ ಸಾಮಗ್ರಿಗಳನ್ನು ಯಾವುದೇ ಶುಲ್ಕವಿಲ್ಲದೆ ಸಮುದಾಯದ ಸ್ವಯಂಸೇವಕರು ಅಶಕ್ತರ ಮನೆಬಾಗಿಲುಗಳಿಗೇ ತಲುಪಿಸುವ ಕಾಯಕದಲ್ಲಿ ಕಳೆದ ಎರಡು ವಾರಗಳಿಂದ ನಿರತರಾಗಿದ್ದಾರೆ ಎಂದು ಸಮುದಾಯದ ಸಂಸ್ಥಾಪಕರಾದ ಅರ್ಶೆಲ್ ಅಖ್ತರ್ ತಿಳಿಸುತ್ತಾರೆ.
ಸದ್ಯ ಈ ಅಭಿಯಾನದಲ್ಲಿ 16 ಸ್ವಯಂಸೇವಕರಿದ್ದು, ಗೌಹಾಟಿಯ ವಿವಿಧ ಭಾಗಗಳಿಗೆ, ತಂತಮ್ಮ ಮನೆಗಳಿಂದ ಮೂರು ಕಿಮೀ ವ್ಯಾಪ್ತಿಯಲ್ಲಿ, ಆಹಾರ, ಔಷಧ, ದಿನಸಿಗಳನ್ನು ತಲುಪಿಸುತ್ತಿದ್ದಾರೆ. ಆನ್ಲೈನ್ ಪಾವತಿ ಅಥವಾ ನಗದಿನ ರೂಪದಲ್ಲಿ ಫಲಾನುಭವಿಗಳು ತಾವು ತರಿಸಿಕೊಂಡ ಸಾಮಗ್ರಿಗಳಿಗೆ ಪೇಮೆಂಟ್ ಮಾಡುತ್ತಿದ್ದಾರೆ.