ಗುರುಗ್ರಾಮ್: ಗುರುಗ್ರಾಮ್‌ನ ಸೋಹ್ನಾ ಪ್ರದೇಶದಲ್ಲಿ ಕುಡಿಯುವ ನೀರೆಂದು ತಪ್ಪಾಗಿ ಪೇಂಟ್ ಥಿನ್ನರ್ ಸೇವಿಸಿದ ಎರಡು ವರ್ಷದ ಮಗು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ಹರ್ಯಾಣದ ಹಟಿನ್ ನ 2 ವರ್ಷದ ಹಕ್ಷನ್ ಎಂಬ ಮಗು ರಾಸಾಯನಿಕ ವಸ್ತುವನ್ನು ನೀರು ಎಂದು ತಪ್ಪಾಗಿ ಸೇವಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಮಗುವಿನ ಪೋಷಕರು ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಸೋಹ್ನಾ ಗ್ರಾಮಕ್ಕೆ ಭೇಟಿ ನೀಡಿದ್ದರು. ತಮ್ಮ ಮಗು ರಾಸಾಯನಿಕ ಸೇವಿಸುತ್ತಿರುವುದನ್ನು ಅವರು ಗಮನಿಸಿರಲಿಲ್ಲ. ಕುಟುಂಬದ ಸಂಬಂಧಿಯೊಬ್ಬರು ಮನೆಯಲ್ಲಿ ಪೇಂಟಿಂಗ್ ಕೆಲಸಕ್ಕೆ ಬಣ್ಣ ಬೆರೆಸಲು ಬಳಸುತ್ತಿದ್ದ ಥಿನ್ನರ್ ಖರೀದಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಗು ರಾಸಾಯನಿಕ ಪದಾರ್ಥನ್ನು ಸೇವಿಸಿದ ನಂತರ, ಪ್ರಜ್ಞೆ ತಪ್ಪಿ ಬಾಯಿಯಿಂದ ನೊರೆ ಬರಲು ಪ್ರಾರಂಭಿಸಿದೆ.. ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದನ್ನು ನೋಡಿ ಆಘಾತಗೊಂಡ ಪೋಷಕರು ಮಗುವನ್ನು ಸೊಹ್ನಾದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಮಗು ಮೃತಪಟ್ಟಿರುವುದಾಗಿ ಘೋಷಿಸಿದರು.