ಗುರುಗ್ರಾಮ: ಚಲಿಸುತ್ತಿದ್ದ ಕಾರಿನೊಳಗೆ ಜನರು ಪಟಾಕಿ ಸಿಡಿಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹರಿಯಾಣದ ಗುರುಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಘಟನೆಯು ಜನರಲ್ಲಿ ಸುರಕ್ಷತೆಯ ಕಾಳಜಿಯನ್ನು ಪ್ರಶ್ನಿಸುವಂತೆ ಮಾಡಿದೆ. ಯುವಕರ ಅಜಾಗರೂಕ ವರ್ತನೆಗೆ ನೆಟ್ಟಿಗರು ಸಿಡಿಮಿಡಿಗೊಂಡಿದ್ದಾರೆ.
ರಸ್ತೆಯಲ್ಲಿ ಇತರೆ ವಾಹನಗಳು ಹಾದು ಹೋಗುತ್ತಿರುವಾಗ ಕಾರಿನೊಳಗಿನಿಂದ ಪಟಾಕಿಗಳನ್ನು ಸುಡುವ ವಿಡಿಯೋ ವೈರಲ್ ಆಗಿದೆ. ಕಾರಿನೊಳಗಿನಿಂದ ಪಟಾಕಿಗಳನ್ನು ಹೊರಗೆ ಸಿಡಿಸುತ್ತಿದ್ದಂತೆ ಇತರೆ ವಾಹನಗಳು ಅಂತರ ಕಾಯ್ದುಕೊಂಡಿದೆ. ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಇನ್ನು ವಿಡಿಯೋ ವೈರಲ್ ಆಗುತ್ತಿದ್ದಂತೆ ಗುರುಗ್ರಾಮ ಟ್ರಾಫಿಕ್ ಪೊಲೀಸರು ಅಲರ್ಟ್ ಆಗಿದ್ದಾರೆ. ದುಷ್ಕರ್ಮಿಗಳನ್ನು ಪತ್ತೆ ಹಚ್ಚುವ ಪ್ರಯತ್ನ ಆರಂಭಿಸಿರುವುದಾಗಿ ಡಿಸಿಪಿ ವೀರೇಂದ್ರ ವಿಜ್ ತಿಳಿಸಿದ್ದಾರೆ. ಆದರೆ, ಪಟಾಕಿ ಸಿಡಿಸಿದ ಕಾರಿನ ನಂಬರ್ ಪ್ಲೇಟ್ ಅಸ್ಪಷ್ಟವಾಗಿದ್ದು, ಅಪರಾಧಿಗಳನ್ನು ಪತ್ತೆ ಹಚ್ಚಲು ತುಸು ಕಷ್ಟವಾಗಿದೆ. ಹೀಗಾಗಿ ಯುವಕರನ್ನು ಗುರುತಿಸಲು ಪೊಲೀಸರು ಆ ಪ್ರದೇಶದಲ್ಲಿನ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
ಕಾರಿನೊಳಗಿನಿಂದ ಪಟಾಕಿ ಸಿಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಯುವಕರ ಮೇಲೆ ಅನೇಕ ಆರೋಪಗಳು ದಾಖಲಾಗುವ ನಿರೀಕ್ಷೆಯಿದೆ. ತಾವು ಮಾಡುತ್ತಿರುವುದು ಅಪರಾಧ ಎಂದು ತಿಳಿದಿದ್ದರೂ ಯುವಕರು ಈ ರೀತಿ ವರ್ತಿಸಿದ್ದಾರೆ. ಅದಕ್ಕಾಗಿ ಅವರು ತಮ್ಮ ಕಾರಿನ ನಂಬರ್ ಪ್ಲೇಟ್ ಮರೆಮಾಚಿರಬಹುದು ಎನ್ನಲಾಗಿದೆ.