ಗುರುಗ್ರಾಮದ 2 ಗ್ರಾಮಗಳಾದ ಹಮೀರ್ಪುರ ಹಾಗೂ ಖೇತವಾಸ್ ಎಂಬಲ್ಲಿ ಸಂಪೂರ್ಣ ಜನತೆಗೆ ಮೊದಲ ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ. ಈ ಮೂಲಕ 100 ಪ್ರತಿಶತ ಲಸಿಕೆ ದಾಖಲೆ ಮಾಡಿದ ಮೊದಲ ಗ್ರಾಮಗಳು ಎಂಬ ಕೀರ್ತಿಗೆ ಪಾತ್ರವಾಗಿವೆ. ಅದೇ ರೀತಿ ಅಕ್ಲಿಮ್ಪುರ, ಹಸನ್ಪುರ, ಖುಂತ್ಪುತಿ, ಮೀಕೋ ಹಾಗೂ ನೂರ್ಪುರ್ ಗ್ರಾಮಗಳು ಸಹ 100 ಪ್ರತಿಶತ ಲಸಿಕೆ ದಾಖಲೆ ಮಾಡುವತ್ತ ದಾಪುಗಾಲು ಇಡುತ್ತಿವೆ.
ಕೊರೊನಾ ಲಸಿಕೆಗೆ ಅರ್ಹರಾಗಿರುವ 17,46,998 ಜನರನ್ನ ಹೊಂದಿರುವ ಗುರುಗ್ರಾಮದಲ್ಲಿ 74 ಪ್ರತಿಶತದಷ್ಟು ಮೊದಲ ಡೋಸ್ ಲಸಿಕೆ ಪೂರೈಕೆ ಮಾಡಲಾಗಿದೆ.
ಕೋವಿನ್ ಪೋರ್ಟಲ್ನಲ್ಲಿ ನಮೂದಾಗಿರುವ ಮಾಹಿತಿಯ ಪ್ರಕಾರ ಗುರುಗ್ರಾಮದಲ್ಲಿ 16,05,710 ಲಸಿಕೆ ನೀಡಲಾಗಿದೆ. ಇದರಲ್ಲಿ 12,92,643 ಮಂದಿಗೆ ಮೊದಲ ಡೋಸ್ ಹಾಗೂ 3,13,067 ಮಂದಿಗೆ ಎರಡೂ ಡೋಸ್ ಲಸಿಕೆ ನೀಡಲಾಗಿದೆ.
ಗುರುಗ್ರಾಮದಲ್ಲಿ ಒಟ್ಟು 234 ಗ್ರಾಮಗಳಿದ್ದು ಹಮೀರಪುರ ಗ್ರಾಮದಲ್ಲಿ 282 ಜನಸಂಖ್ಯೆ ಇದೆ. ಇದರಲ್ಲಿ 143 ಮಂದಿ ಕೊರೊನಾ ಲಸಿಕೆ ಸ್ವೀಕರಿಸಲು ಅರ್ಹರಾಗಿದ್ದಾರೆ.
ಈ 143 ಮಂದಿ ಕೊರೊನಾ ಮೊದಲ ಡೋಸ್ ಪಡೆದಿದ್ದಾರೆ. ಅದೇ ರೀತಿ ಖೇತವಾಸ್ ಗ್ರಾಮದಲ್ಲಿ ಒಟ್ಟು 1222 ಜನಸಂಖ್ಯೆ ಇದ್ದು ಇದರಲ್ಲಿ 794 ಮಂದಿ ಲಸಿಕೆಗೆ ಅರ್ಹರಾಗಿದ್ದಾರೆ. ಹಾಗೂ ಪ್ರತಿಯೊಬ್ಬರೂ ಕೊರೊನಾ ಮೊದಲ ಡೋಸ್ ಸ್ವೀಕರಿಸಿದ್ದಾರೆ.
ಮೊದಲು ಈ ಗ್ರಾಮಗಳ ಜನತೆಗೆ ಕೊರೊನಾ ಲಸಿಕೆ ಸ್ವೀಕರಿಸಲು ಹಿಂಜರಿಕೆ ಇತ್ತು. ಆದರೆ ಆರೋಗ್ಯ ಅಧಿಕಾರಿಗಳು ಮನವೊಲಿಸುವಲ್ಲಿ ಯಶಸ್ವಿಯಾದ ಬಳಿಕ ಗ್ರಾಮಸ್ಥರು 100 ಪ್ರತಿಶತ ಮೊದಲ ಡೋಸ್ ಲಸಿಕೆ ದಾಖಲೆ ಮಾಡಿದ್ದಾರೆ.