![](https://kannadadunia.com/wp-content/uploads/2023/06/5194cdf9-51f6-493b-83d4-11685eba9134-1024x576.jpg)
ಇಬ್ಬರು ವ್ಯಕ್ತಿಗಳು ದೆಹಲಿ-ಜೈಪುರ ಹೆದ್ದಾರಿಯಲ್ಲಿ ವೈನ್ ಶಾಪ್ಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯು ಸಿಸಿ ಕ್ಯಾಮೆರಾ ದೃಶ್ಯಾವಳಿಗಳಲ್ಲಿ ಸೆರೆಯಾಗಿದ್ದು ಶುಕ್ರವಾರ ರಾತ್ರಿ ದಾಳಿ ನಡೆದಿದೆ. ಘಟನೆಯಲ್ಲಿ ಓರ್ವರು ಗಂಭೀರವಾಗಿ ಗಾಯಗೊಂಡಿದ್ದು ಮತ್ತೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳೀಯ ವರದಿಗಳ ಪ್ರಕಾರ ಗಾಯಗೊಂಡಿರುವ ಸಂದೀಪ್ ಮತ್ತು ಅಪರಿಚಿತ ವ್ಯಕ್ತಿಯೊಬ್ಬರನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ. ಕ್ರೈಂ ಬ್ರಾಂಚ್ ಮತ್ತು ಮನೇಸರ್ ಪೊಲೀಸ್ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಘಟನೆಯ ಕುರಿತು ತನಿಖೆಯನ್ನು ಪ್ರಾರಂಭಿಸಿದರು.
ಮದ್ಯ ಖರೀದಿಸಲು ಬಂದಿದ್ದ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಫಾರ್ಚುನರ್ ಕಾರಿನಲ್ಲಿ ಬಂದ ಇಬ್ಬರು ಯುವಕರು ವೈನ್ ಶಾಪ್ ಮೇಲೆ ಗುಂಡು ಹಾರಿಸಿದ್ದಾರೆ. ಒಬ್ಬ ವ್ಯಕ್ತಿಯ ಕುತ್ತಿಗೆಗೆ ಗುಂಡೇಟಿನ ಗಾಯವಾಗಿದ್ದು, ಮತ್ತೊಬ್ಬನ ತೋಳಿಗೆ ಗುಂಡು ತಗುಲಿದೆ. ಗಾಯಾಳುಗಳನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಸಂದೀಪ್ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ಗುಂಡಿನ ದಾಳಿಯ ಬಗ್ಗೆ ಮಾಹಿತಿ ಪಡೆದ ನಂತರ, ಕ್ರೈಂ ಬ್ರಾಂಚ್ ಮತ್ತು ಮನೇಸರ್ ಠಾಣೆ ಪೊಲೀಸರು ಘಟನಾ ಪ್ರದೇಶದಲ್ಲಿ ಲಭ್ಯವಿರುವ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಬಳಸಿಕೊಂಡು ಗುಂಡಿನ ದಾಳಿಗೆ ಕಾರಣರಾದ ಕಾರಿನಲ್ಲಿದ್ದ ವ್ಯಕ್ತಿಗಳನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.