ಅಂಗಾಂಗ ವ್ಯಾಪಾರದ ಗ್ಯಾಂಗ್ ಒಂದು ಗುಂಟೂರಿನ ಬಡ ಆಟೋ ರಿಕ್ಷಾ ಚಾಲಕನಿಗೆ ಮೋಸ ಮಾಡಿದೆ. ಕಿಡ್ನಿ ದಾನ ಮಾಡಿದ್ರೆ 29 ಲಕ್ಷ ರೂಪಾಯಿ ನೀಡೋದಾಗಿ ಭರವಸೆ ನೀಡಿದ್ದ ಗ್ಯಾಂಗ್ ನಂತ್ರ ಕೈ ಎತ್ತಿದೆ. ಬರೀ 1.1 ಲಕ್ಷ ರೂಪಾಯಿ ನೀಡಿದೆ ಎಂದು ಮೋಸ ಹೋದ ವ್ಯಕ್ತಿ ಆರೋಪ ಮಾಡಿದ್ದಾನೆ.
ಗುಂಟೂರು ಪಟ್ಟಣದ ಜಿ ಮಧು ಬಾಬು ಮೋಸ ಹೋದ ವ್ಯಕ್ತಿ. ಆತನಿಗೆ 31 ವರ್ಷ ವಯಸ್ಸು. 2023ರ ನವೆಂಬರ್‌ನಲ್ಲಿ ಗ್ಯಾಂಗ್ ಮಧು ಬಾಬು ಅವರನ್ನು ಸಂಪರ್ಕಿಸಿತ್ತು. ತಮ್ಮ ವೆಬ್ ಸೈಟ್ ಬಗ್ಗೆಯೂ ಹೇಳಿತ್ತು. ವೆಬ್ ಸೈಟ್ ಹಾಗೂ ಫೇಸ್ಬುಕ್ ಚೆಕ್ ಮಾಡಿದ್ದ ಮಧು ಬಾಬುವನ್ನು ಇನ್ನೊಬ್ಬ ವ್ಯಕ್ತಿ ಸಂಪರ್ಕಿಸಿದ್ದ. ತನಗೆ 30 ಲಕ್ಷ ರೂಪಾಯಿ ಸಿಕ್ಕಿದೆ ಎಂದು ಭರವಸೆ ನೀಡಿದ್ದ.
ಮಧುಬಾಬು ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ. ಅವರ ತಂದೆ ಆರ್ಥಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಲ ತೀರಿಸಲಾಗದೆ ಮಧುಬಾಬು ಕಿಡ್ನಿ ಮಾರಾಟಕ್ಕೆ ಮುಂದಾಗಿದ್ದರು. 31-33 ವರ್ಷದೊಳಗಿನ O + ve ಮತ್ತು B + ve ರಕ್ತದ ಗುಂಪಿನ ಅಗತ್ಯವಿದೆ ಎಂದು ಗ್ಯಾಂಗ್ ತಿಳಿಸಿದ್ದರಿಂದ ಅವರು ಕಿಡ್ನಿ ಮಾರಾಟ ಮಾಡಿದ್ದರು.
ಜೂನ್ 15, 2024 ರಂದು ಮೂತ್ರಪಿಂಡವನ್ನು ದಾನ ಮಾಡಿದ್ದು, ತಂಡ ಬರೀ 1.1 ಲಕ್ಷ ರೂಪಾಯಿ ನೀಡಿದೆ. ವಿಜಯವಾಡದ ವಿಜಯಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ನವೆಂಬರ್ 2023 ರಿಂದ ಜೂನ್ 2024 ರವರೆಗೆ ಮಧುಗೆ ಸುಮಾರು 1.1 ಲಕ್ಷ ರೂಪಾಯಿಗಳನ್ನು ವೆಚ್ಚವಾಗಿ ಪಾವತಿಸಲಾಗಿದೆ. ಮೋಸ ಮಾಡಿದ ಗ್ಯಾಂಗ್ ಬಂಧಿಸುವಂತೆ ಮಧುಬಾಬು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಗ್ಯಾಂಗ್ ಅನೇಕರಿಗೆ ಇದೇ ರೀತಿ ಮೋಸ ಮಾಡಿದೆ ಎಂಬ ಅನುಮಾನ ಬಂದಿದ್ದು, ಪೊಲೀಸರು ತನಿಖೆ ಶುರು ಮಾಡಿದ್ದಾರೆ.