ಬನ್ಸ್ವಾರಾ: ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಮದುವೆ ವೇಳೆ ಸಂಭ್ರಮದ ಗುಂಡು ಹಾರಿಸುವ ಸಂಪ್ರದಾಯ ಇನ್ನೂ ಇದೆ. ಇದು ಕಾನೂನುಬಾಹಿರವಾಗಿದ್ದರು, ಇದರಿಂದ ಆಕಸ್ಮಿಕ ಸಾವುಗಳಿಗೆ ಕಾರಣವಾಗಿದ್ದರೂ ಕೂಡ ಜನರು ಈ ಪದ್ಧತಿಯನ್ನು ಇನ್ನೂ ಕೂಡ ಮುಂದುವರೆಸಿಕೊಂಡು ಬಂದಿದ್ದಾರೆ. ಇದೀಗ ಸಚಿವರೊಬ್ಬರ ಪುತ್ರನ ಮದುವೆಯಲ್ಲಿ ಬಂದೂಕಿನಿಂದ ಗುಂಡು ಹಾರಿಸಿರುವ ವಿಡಿಯೋ ಭಾರಿ ವೈರಲ್ ಆಗಿದೆ.
ಬನ್ಸ್ವಾರಾದಲ್ಲಿ ಸಚಿವ ಮಹೇಂದ್ರಜಿತ್ ಸಿಂಗ್ ಮಾಳವಿಯಾ ಅವರ ಪುತ್ರನ ವಿವಾಹದ ಆರತಕ್ಷತೆಯಲ್ಲಿ ಬಂದೂಕುಗಳನ್ನು ಹಿಡಿದು ಗಾಳಿಯಲ್ಲಿ ಗುಂಡು ಹಾರಿಸಿದ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪೊಲೀಸರು ಮತ್ತು ಇತರ ಹಲವು ಸಚಿವರುಗಳ ಉಪಸ್ಥಿತಿಯ ಹೊರತಾಗಿಯೂ, ಅತಿಥಿಗಳು ಬಹಿರಂಗವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ವರದಿ ಪ್ರಕಾರ, ಮಹೇಂದ್ರಜಿತ್ ಸಿಂಗ್ ಮಾಳವಿಯಾ ಅವರ ಪುತ್ರ ಚಂದ್ರವೀರ್ ಸಿಂಗ್ ಅವರ ವಿವಾಹ ಆರತಕ್ಷತೆ ಸೋಮವಾರ ರಾತ್ರಿ ನಡೆಯಿತು. ಹಲವಾರು ಜನರು ಬಂದೂಕುಗಳನ್ನು ಹಿಡಿದುಕೊಂಡಿದ್ದು, ಗಾಳಿಯಲ್ಲಿ ಗುಂಡು ಹಾರಿಸುತ್ತಿರುವುದು ಕಂಡುಬಂದಿದೆ. ಸಮಾರಂಭಕ್ಕೆ ಸಜ್ಜುಗೊಳಿಸಲಾಗಿದ್ದ ಬೃಹತ್ ವೇದಿಕೆ ಮೇಲೆ ಗುಂಡು ಹಾರಿಸಲಾಗಿದೆ.
ಮಾಳವೀಯ ಸೇರಿದಂತೆ ಹಲವು ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು, ಪೊಲೀಸರು ಮತ್ತು ಆಡಳಿತ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಆರತಕ್ಷತೆ ವೇಳೆ ಸುಮಾರು 40 ಮಂದಿ ಬಂದೂಕು ಹಿಡಿದಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಬಿಜೆಪಿ ಸರ್ಕಾರದಲ್ಲಿ ರಾಜ್ಯ ಸಚಿವರಾಗಿದ್ದ ಧನ್ ಸಿಂಗ್ ರಾವತ್ ಅವರ ಪುತ್ರಿ ಹರ್ಷಿತಾ ಅವರನ್ನು ಚಂದ್ರವೀರ್ ವಿವಾಹವಾಗಿದ್ದಾರೆ. ಮದುವೆಯ ನಂತರ ಸೋಮವಾರ ರಾತ್ರಿ ಬನ್ಸ್ವಾರಾ ನಗರದಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಿತು. ರೆಸಾರ್ಟ್‌ನಲ್ಲಿ ನಡೆದ ಆರತಕ್ಷತೆ ವೇಳೆ ಅಲ್ಲಿದ್ದವರು ಸಂಭ್ರಮದಿಂದ ಗುಂಡು ಹಾರಿಸುತ್ತಿರುವುದು ಕಂಡುಬಂದಿದೆ.
ಗುಂಡಿನ ಚಕಮಕಿಯ ಜೊತೆಗೆ ಕಾಂಗ್ರೆಸ್ ಮತ್ತು ಬಿಜೆಪಿಯ ಇಬ್ಬರು ರಾಜಕೀಯ ಪ್ರತಿಸ್ಪರ್ಧಿಗಳು ಈಗ ಸಂಬಂಧಿಕರಾಗಿರುವುದರಿಂದ ಮದುವೆಯ ಬಗ್ಗೆಯೂ ಚರ್ಚೆ ನಡೆಯುತ್ತಿದೆ.