ಮಾಸ್ಕೋ: ರಷ್ಯಾದ ಮಾಸ್ಕೋದಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಉಗ್ರರ ಗುಂಡಿನ ದಾಳಿಗೆ ಮಾಲ್ ನಲ್ಲಿ ರಕ್ತದೋಕುಳಿಯೇ ಹರಿದಿದೆ.
ಕ್ರೋಕಸ್ ಸಿಟಿ ಹಾಲ್ ನಲ್ಲಿ ರಾಕ್ ಮ್ಯೂಸಿಕ್ ಕಾರ್ಯಕ್ರಮದ ವೇಳೆ ನಾಗರೀಕರ ನರಮೇಧ ನಡೆಸಲಾಗಿದೆ. ನಾಲ್ಕೈದು ಉಗ್ರರು ಮಾಲ್ ನಲ್ಲಿ ಗುಂಡಿನ ಸುರಿಮಳೆಗೈದಿದ್ದಾರೆ. 40ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, 150ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಮುಂಬೈ ದಾಳಿ ಮಾದರಿಯಲ್ಲಿ ರಷ್ಯಾದಲ್ಲಿ ದಾಳಿ ನಡೆಸಲಾಗಿದ್ದು, ಎರಡು ದಶಕಗಳಲ್ಲಿ ರಷ್ಯಾದಲ್ಲಿ ನಡೆದ ಭೀಕರ ಉಗ್ರ ದಾಳಿ ಇದಾಗಿದೆ. ಐಎಸ್ಐಎಸ್ ದಾಳಿಯ ಹೊಣೆ ಹೊತ್ತುಕೊಂಡಿದೆ.
ಉಗ್ರರ ಗುಂಡಿನ ದಾಳಿಯ ಬಳಿಕ ಸ್ಪೋಟದಿಂದಾಗಿ ಕಟ್ಟಡ ಹೊತ್ತಿ ಉರಿದಿದೆ. ಐವರು ಭಯೋತ್ಪಾದಕರ ಪೈಕಿ ಓರ್ವನನ್ನು ಸೆರೆ ಹಿಡಿಯಲಾಗಿದೆ.
ಸಂಗೀತ ಕೇಳಲು ಬಂದವರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಮಾಲ್ ಸಭಾಂಗಣದಲ್ಲಿ ಪಿಕ್ನಿಕ್ ರಾಕ್ ಬ್ಯಾಂಡ್ ನಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಗೀತ ಕಾರ್ಯಕ್ರಮ ಶುರುವಾಗುವ ಮೊದಲೇ ಗುಂಡಿನ ದಾಳಿ ನಡೆಸಲಾಗಿದೆ. ಸಾವಿರಾರು ಮಂದಿ ಕೂರಬಹುದಾದ ಹಾಲ್ ನಲ್ಲಿ ಭಾರಿ ಜನ ಸೇರಿದ್ದ ವೇಳೆಯಲ್ಲೇ ಐಸಿಸ್ ಉಗ್ರರು ದಾಳಿ ಮಾಡಿದ್ದಾರೆ. ಜನರನ್ನು ಕೊಂದು ಹೊರ ಬಂದು ಬಾಂಬ್ ಸ್ಪೋಟಿಸಿದ್ದು, ಕಟ್ಟಡಕ್ಕೆ ಬೆಂಕಿ ತಗುಲಿದೆ. ಮೂರು ಹೆಲಿಕಾಪ್ಟರ್, ಅಗ್ನಿಶಾಮಕ ವಾಹನಗಳ ಮೂಲಕ ಬೆಂಕಿಯನ್ನು ನಂದಿಸಲು ಹರಸಾಹಸ ನಡೆಸಲಾಗಿದೆ.