ಚಾಮರಾಜನಗರ: ಗುಂಡ್ಲುಪೇಟೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಬುಧವಾರ ಸಂಜೆ ಮಹಿಳೆಯೊಬ್ಬಳು ಅಪರಿಚಿತ ಅಜ್ಜಿ ಕೈಗೆ ಮಗು ಕೊಟ್ಟು ಪರಾರಿಯಾಗಿದ್ದಾಳೆ.
ಮಹದೇವಮ್ಮ ಎಂಬುವರು ಕಲಿಗೌಡನಹಳ್ಳಿಗೆ ಹೋಗಲು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದರು. ಅವರ ಬಳಿಗೆ ಬಂದ ಮಹಿಳೆ ಮೂತ್ರ ವಿಸರ್ಜನೆಗೆ ತೆರಳಬೇಕಿದೆ ಎಂದು ಒಂದು ವರ್ಷದ ಹೆಣ್ಣು ಮಗುವನ್ನು ಅಜ್ಜಿ ಕೈಗೆ ಕೊಟ್ಟು ಪರಾರಿಯಾಗಿದ್ದಾಳೆ. ಬಹಳ ಹೊತ್ತಿನವರೆಗೆ ಕಾದ ಮಹದೇವಮ್ಮ ಬಸ್ ನಿಲ್ದಾಣದಲ್ಲಿದ್ದ ಬೇರೆ ಪ್ರಯಾಣಿಕರಿಗೆ ವಿಷಯ ತಿಳಿಸಿದ್ದಾರೆ.
ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಗುಂಡ್ಲುಪೇಟೆ ಪೊಲೀಸರು ಹೆಣ್ಣು ಮಗುವನ್ನು ಪಟ್ಟಣದ ಮಹಿಳಾ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾರೆ. ಸಿಸಿ ಕ್ಯಾಮರಾ ದೃಶ್ಯ ಪರಿಶೀಲಿಸಿದಾಗ ಹಳದಿ ಸೀರೆ ಧರಿಸಿದ್ದ ಮಹಿಳೆ ಮಹದೇವಮ್ಮನವರ ಕೈಗೆ ಮಗು ಕೊಟ್ಟಿರುವುದು ಸೆರೆಯಾಗಿದೆ. ಮಹಿಳೆಯ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.