ಕಲಬುರಗಿ: ಕಲಬುರಗಿ ಗ್ರಾಮಾಂತರ ಸಿಪಿಐ ಶ್ರೀಮಂತ್ ಇಲ್ಲಾಳ್ ಅವರ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರ ಮೇಲೆ ಹಲ್ಲೆ ನಡೆಸಿ ಪಿಸ್ತೂಲ್ ದರೋಡೆ ಮಾಡಲಾಗಿದೆ.
ಸಿಪಿಐ ಶ್ರೀಮಂತ್ ಅವರ ಬಳಿ ಇದ್ದ ಸರ್ವಿಸ್ ಪಿಸ್ತೂಲ್, ಮೊಬೈಲ್ ಮತ್ತು ಹಣ, ಚಿನ್ನದ ಉಂಗುರವನ್ನು ಗಾಂಜಾ ದಂಧೆಕೋರರು ಕದ್ದುಕೊಂಡು ಹೋಗಿದ್ದಾರೆ. ಪೊಲೀಸ್ ಸಿಬ್ಬಂದಿ ಬಳಿ ಇದ್ದ ಹಣವನ್ನು ಕೂಡ ದುರುಳರು ಕಸಿದುಕೊಂಡು ಹೋಗಿದ್ದಾರೆ. ಸರ್ವಿಸ್ ಪಿಸ್ತೂಲ್ ನಲ್ಲಿ ಎಂಟು ಜೀವಂತ ಗುಂಡುಗಳು ಇದ್ದವು ಎನ್ನುವ ಮಾಹಿತಿ ಲಭ್ಯವಾಗಿದೆ. ಪೊಲೀಸ್ ಇಲಾಖೆಗೆ ಸರ್ವಿಸ್ ಪಿಸ್ತೂಲ್ ನಾಪತ್ತೆಯಾಗಿರುವುದು ತಲೆ ನೋವಾಗಿ ಪರಿಣಮಿಸಿದ್ದು ಗಾಂಜಾ ದಂಧೆಕೋರರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಗಾಂಜಾ ಬೆಳೆದಿದ್ದ ಜಮೀನುಗಳ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿದ್ದ ಗಾಂಜಾ ದಂಧೆಕೋರರು ಪೊಲೀಸರ ಮೇಲೆಯೇ ದಾಳಿ ನಡೆಸಿದ್ದರು. ಸೆಪ್ಟೆಂಬರ್ 23 ರಂದು ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಮಂಠಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮಹಾರಾಷ್ಟ್ರದ ಉಮ್ಮರ್ಗಾ ಗಡಿಭಾಗದಲ್ಲಿ ಈ ಪೊಲೀಸ್ ಠಾಣೆ ಇದೆ. ಸಿಪಿಐ ಶ್ರೀಮಂತ್ ಗಂಭೀರವಾಗಿ ಗಾಯಗೊಂಡಿದ್ದು, ಕಲಬುರ್ಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.