1997 ರಲ್ಲಿ ಸಂಗೀತ ನಿರ್ದೇಶಕ ಮತ್ತು ಗಾಯಕ ಗುಲ್ಶನ್ ಕುಮಾರ್ ಹತ್ಯೆಯ ನಂತರ ‘ಸತ್ಯ’ ಚಲನಚಿತ್ರ ಅರ್ಧಕ್ಕೆ ನಿಂತಾಗ ಒಂದು ವಾರ ಕಾಲ ಅನುಭವಿಸಿದ ಪ್ರಕ್ಷುಬ್ಧತೆಯ ಬಗ್ಗೆ ನಟ ಮನೋಜ್ ಬಾಜಪೇಯಿ ಮಾತನಾಡಿದ್ದಾರೆ.
ಗುಲ್ಶನ್ ಕುಮಾರ್ ಹತ್ಯೆ ಬಳಿಕ ಭಯಗೊಂಡು ಚಿತ್ರ ನಿರ್ಮಾಪಕರು ಹಿಂದೆ ಸರಿದಿದ್ದರಿಂದ ಸಿನಿಮಾ ಶೂಟಿಂಗ್ ಒಂದು ವಾರ ಕಾಲ ಸ್ಥಗಿತಗೊಂಡಿತ್ತು. ಆಗ ತಾನೇ ಚಿತ್ರರಂಗಕ್ಕೆ ಅನೇಕ ಆಸೆ ಕನಸು ಹೊತ್ತು ಬಂದಿದ್ದ ನಾನು ಇಲ್ಲಿಗೆ ನನ್ನ ಕೆರಿಯರ್ ಮುಗಿಯಿತು ಎಂದು ನಿರ್ಧರಿಸಿದೆ. ಮುಂದೆ ಏನಾಗುತ್ತೋ ಏನೋ ಎಂಬ ಚಿಂತೆಯಲ್ಲಿದ್ದಾಗ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸೋಲನ್ನು ಒಪ್ಪಿಕೊಳ್ಳದೇ ಛಲ ಬಿಡದೇ ಮತ್ತೊಬ್ಬ ನಿರ್ಮಾಪಕರನ್ನು ಚಿತ್ರಕ್ಕೆ ಹುಡುಕಿ ತರೆತಂದರು ಎಂದಿದ್ದಾರೆ.
ಮುಂಬೈ ಭೂಗತ ಜಗತ್ತಿನ ಕಥಾ ಹಂದರದ ‘ಸತ್ಯ’ ಚಿತ್ರ ಮನೋಜ್ ಬಾಜಪೇಯಿ ಅವರ ಸಿನಿಜೀವನದ ಪ್ರಮುಖ ಚಿತ್ರಗಳ ಸಾಲಿನಲ್ಲಿದೆ.
ಯೂಟ್ಯೂಬ್‌ನಲ್ಲಿ ಸುಶಾಂತ್ ಸಿನ್ಹಾ ಅವರೊಂದಿಗಿನ ಸಂದರ್ಶನದಲ್ಲಿ, ಮನೋಜ್ ಬಾಜಪೇಯಿ ಅವರು ಈ ಬಗ್ಗೆ ಮಾತನಾಡಿದ್ದು, ಮುಂಬೈಗೆ ಬಂದು ಕೆಲಸ ಹುಡುಕುವಾಗ ಎದುರಿಸಿದ ಕಷ್ಟಗಳ ಬಗ್ಗೆ ಹಲವು ವಿಷಯಗಳನ್ನು ತೆರೆದಿಟ್ಟಿದ್ದಾರೆ. ಸತ್ಯ ಸಿನಿಮಾಗೆ 1.5 ಲಕ್ಷ ಸಂಭಾವನೆ ಪಡೆದಿದ್ದರು. ಆದರೆ ಸಿನಿಮಾ ಶೂಟಿಂಗ್ ಆರಂಭವಾಗ್ತಿದ್ದಂತೆ ಗುಲ್ಶನ್ ಕುಮಾರ್ ಭೂಗತ ಜಗತ್ತಿನ ಶಕ್ತಿಗಳಿಂದ ಹತ್ಯೆಯಾದಾಗ ಸಿನಿಮಾ ಮತ್ತೊಂದು ಹಾದಿ ಹಿಡಿಯಿತು.
“ಸತ್ಯ ಸಿನಿಮಾ ಅವಕಾಶ ಸಿಕ್ಕಾಗ ನಾನು ಯಾರಿಗೂ ಹೇಳಲಿಲ್ಲ. ನನ್ನ ರೂಮ್ ಮೇಟ್ ಗೂ ಕೂಡ ಹೇಳಿರಲಿಲ್ಲ. ಚಿತ್ರ ರದ್ದಾಗಬಹುದು ಎಂದು ನಾನು ಯಾವಾಗಲೂ ಚಿಂತಿಸುತ್ತಿದ್ದೆ, ದುರದೃಷ್ಟವಶಾತ್ ಹಾಗೆಯೇ ಆಯ್ತು. ನಾವು ಶೂಟಿಂಗ್ ಪ್ರಾರಂಭಿಸಿದ ಐದು ದಿನಗಳ ನಂತರ ಗುಲ್ಶನ್ ಕುಮಾರ್ ಅವರನ್ನು ಕೊಲೆ ಮಾಡಲಾಯಿತು. ಇದರಿಂದ ನಿರ್ಮಾಪಕರು ಹೆದರಿದ ಕಾರಣ ಚಿತ್ರ ಸ್ಥಗಿತಗೊಂಡಿತು. ಗುಲ್ಶನ್ ಕುಮಾರ್ ಹತ್ಯೆಯು ಇಂಡಸ್ಟ್ರಿಯಲ್ಲಿ ಬಹುದೊಡ್ಡ ಘಟನೆಯಾಗಿದ್ದು, ಮುಂಬೈ ಮಾಫಿಯಾ ಕುರಿತು ನಾವು ಸಿನಿಮಾ ಮಾಡುತ್ತಿದ್ದೆವು. ಹಾಗಾಗಿ ನಿರ್ಮಾಪಕರು ತುಂಬಾ ಹೆದರಿ ಹಿಂದೆ ಸರಿದರು. ಆಗಷ್ಟೇ ಪ್ರಾರಂಭವಾಗುತ್ತಿದ್ದ ನನ್ನ ವೃತ್ತಿಜೀವನವ ಹಠಾತ್ತನೆ ಸ್ಥಗಿತಗೊಂಡಿತು” ಎಂದರು.
“ಸುಮಾರು ಒಂದು ವಾರದ ನಂತರ, ರಾಮ್ ಗೋಪಾಲ್ ವರ್ಮಾ, ಭರತ್ ಷಾರನ್ನು ಕರೆ ತಂದರು. ತದನಂತರ ಚಿತ್ರೀಕರಣ ಮತ್ತೆ ಪ್ರಾರಂಭವಾಯಿತು. ಸತ್ಯ ಸಿನಿಮಾಗೆ ನಮ್ಮ ಸರ್ವಸ್ವವನ್ನೂ ಕೊಟ್ಟೆವು. ಆ ಒಂದು ವಾರ ನಮಗೆಲ್ಲ ತುಂಬಾ ಕಷ್ಟವಾಗಿತ್ತು. ನಮ್ಮಲ್ಲಿ ಯಾರಿಗೂ ಏನು ಮಾಡಬೇಕೆಂದು ತೋಚಲಿಲ್ಲ. ಸತ್ಯ ನಮ್ಮ ಏಕೈಕ ಭರವಸೆಯಾಗಿತ್ತು. ಆ ಅನಿಶ್ಚಿತತೆಯು ತುಂಬಾ ಖಿನ್ನತೆಯನ್ನುಂಟುಮಾಡಿತು, ತುಂಬಾ ಹತಾಶವಾಗಿತ್ತು. ಇದು ಮುಗಿಯಿತು ಎಂದು ರಾಮ್ ಗೋಪಾಲ್ ವರ್ಮಾ ಹೇಳುವವರೆಗೂ ನಾನು ಭರವಸೆ ಕಳೆದುಕೊಳ್ಳುವುದಿಲ್ಲ ಎಂದು ನಿರ್ಧರಿಸಿದ್ದೆ. ಆದರೆ ಅವರು ಎಂದಿಗೂ ಸೋಲನ್ನು ಒಪ್ಪಿಕೊಳ್ಳಲಿಲ್ಲ, ನಾವು ತಾತ್ಕಾಲಿಕವಾಗಿ ವಿರಾಮ ತೆಗೆದುಕೊಂಡಿದ್ದೇವೆ ಎಂದು ಮಾತ್ರ ಹೇಳುತ್ತಿದ್ದರು. ಎಂಟು ದಿನಗಳ ನಂತರ ನಮಗೆ ಒಳ್ಳೆಯ ಸುದ್ದಿ ಸಿಕ್ಕಿತು ಎಂದಿದ್ದಾರೆ.
ಸತ್ಯ ಹಿಂದಿ ಚಲನಚಿತ್ರ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ಚಲನಚಿತ್ರಗಳಲ್ಲಿ ಒಂದಾಗಿದೆ ಮತ್ತು ಈ ಸಿನಿಮಾದಲ್ಲಿದ್ದ ಹಲವು ಕಲಾವಿದರು ತಮ್ಮ ವೃತ್ತಿಜೀವನದಲ್ಲಿ ಹೆಚ್ಚಿನ ಹೆಸರು ಮಾಡಲು ಮೂಲವಾಯಿತು.