ಅಹಮದಾಬಾದ್: ಗುಜರಾತ್ ನ ರಾಜ್ ಕೋಟ್ ನಲ್ಲಿರುವ ಗೇಮಿಂಗ್ ಝೋನ್ ನಲ್ಲಿ ಭೀಕರ ಅಗ್ನಿ ದುರಂತ ಪ್ರಕರಣದಲ್ಲಿ 27 ಜನರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಪ್ರಕರಣದ ತನಿಖೆಗೆ ಎಸ್ಐಟಿ ತಂಡ ರಚಿಸಲಾಗಿದೆ.
ಪ್ರಕರಣದ ತನಿಖೆಗೆ ಸಿಐಡಿ ಕ್ರೈಂ ನ ಎಡಿಜಿ ಸುಭಾಷ್ ತ್ರಿವೇದಿ ನೇತೃತ್ವದಲ್ಲಿ ಎಸ್ಐಟಿ ರಚಿಸಲಾಗಿದೆ. 5 ಸದಸ್ಯರ ತಂಡದಿಂದ ತನಿಖೆ ನಡೆಯಲಿದೆ. 72 ಗಂಟೆಯೊಳಗೆ ಪ್ರಾಥಮಿಕ ವರದಿ ನೀಡುವಂತೆ ಸೂಚಿಸಲಾಗಿದೆ.
ಬೆಂಕಿಯ ಕೆನ್ನಾಲಿಗೆಗೆ ಗೇಮಿಂಗ್ ಝೋನ್ ಸುಟ್ಟು ಕರಕಲಾಗಿದೆ. ಶನಿವಾರ ಸಂಜೆ ಟಿಆರ್ ಪಿ ಗೇಮಿಂಗ್ ವಲಯದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಇಡೀ ಪ್ರದೇಶಕ್ಕೆ ವ್ಯಾಪಿಸಿದೆ. 27 ಜನರು ಸಜೀವ ದಹನಗೊಂಡಿದ್ದು, ಹಲವು ಮೃತದೇಹಗಳನ್ನು ಹೊರತೆಯಲಾಗಿದೆ. ವಿಷಯ ತಿಳಿಯುತ್ತಿದ್ದಂತೆ 8 ಅಗ್ನಿಶಾಮಕ ವಾಹನಗಳು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಲು ಯತ್ನಿಸಿವೆ. ಬೆಂಕಿಯ ತೀವ್ರತೆಯ ಹೊಗೆ 3 ಕಿ.ಮೀ ವರೆಗೆ ಗೋಚರಿಸುತ್ತಿತ್ತು. ಬೆಂಕಿ ಧಗಧಗನೆ ಹೊತ್ತಿ ಉರಿಯುತ್ತಿದ್ದರೆ ಗೇಮಿಂಗ್ ಝೋನ್ ನಲ್ಲಿ ಮಕ್ಕಳ, ಪೋಷಕರ ಕೂಗಾಟ, ಚೀರಾಟ ಮುಗಿಲುಮುಟ್ಟಿತ್ತು. ಆದರೆ ಬೆಂಕಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ.