ಮಧ್ಯಾಹ್ನದ ಊಟವಾದ ಬಳಿಕ ನಿದ್ದೆ ಮಾಡುವ ಅಭ್ಯಾಸ ಅನೇಕರಿಗೆ ಇರುತ್ತದೆ. ಆದರೆ ಗುಜರಾತ್ನ ಶಾಹಿಬಾಗ್ ಎಂಬಲ್ಲಿ 24 ವರ್ಷದ ಮಹಿಳೆ ಮಧ್ಯಾಹ್ನ ನಿದ್ದೆ ಮಾಡಿದ ಕಾರಣಕ್ಕೆ ಗಂಡನ ಮನೆಯಲ್ಲಿ ಹೊಡೆತ ತಿಂದಿದ್ದಾಳೆ..!
ಹಲ್ಲೆಗೊಳಗಾದ ಮಹಿಳೆಯು ತನ್ನ ಪತಿಯ ಮನೆಯಲ್ಲಿ ಮಧ್ಯಾಹ್ನ ನಿದ್ರೆ ಮಾಡುತ್ತಿದ್ದುದನ್ನು ಮೊದಲು ಅತ್ತೆ ಖಂಡಿಸಿದ್ದಾರೆ. ಬಳಿಕ ಆಕೆಯ ಪತಿ ಆಕೆ ಮಲಗಿದ್ದ ವೇಳೆ ಹಲ್ಲೆ ನಡೆಸಿದ್ದಾನೆ.
ಹಲ್ಲೆಗೊಳಗಾದ ಮಹಿಳೆಯು ಕಾಡಿ ನಿವಾಸಿಯಾದ ವ್ಯಕ್ತಿಯ ಜೊತೆ 2016 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಇದಾದ ಬಳಿಕ ಆಕೆ ತನ್ನ ಅತ್ತೆಯೊಂದಿಗೆ ವಾಸವಿದ್ದರು. ಮೊದಲಿನಿಂದಲೂ ಅತ್ತೆ ಆಕೆ ಮಧ್ಯಾಹ್ನ ನಿದ್ದೆ ಮಾಡೋದನ್ನು ವಿರೋಧಿಸುತ್ತಿದ್ದರು. ಮುಂಜಾನೆ ಬೇಗ ಏಳುತ್ತಿದ್ದ ಮಹಿಳೆಗೆ ಮಧ್ಯಾಹ್ನ ಊಟವಾದ ತಕ್ಷಣ ನಿದ್ದೆ ಮಾಡದೇ ಇರಲು ಆಗುತ್ತಲಿರಲಿಲ್ಲ.
ವಿಮಾನ ಲ್ಯಾಂಡ್ ಆಗುತ್ತಿದ್ದ ವೇಳೆಯೇ ಆಘಾತಕಾರಿ ಘಟನೆ; ಅದೃಷ್ಟವಶಾತ್ ಪ್ರಯಾಣಿಕರು ಪಾರು
ಮೊದಲ ಬಾರಿಗೆ ಆಕೆಯ ಪತಿ ಇದೇ ಕಾರಣಕ್ಕಾಗಿ ಆಕೆಯ ಮೇಲೆ ಹಲ್ಲೆ ನಡೆಸಿದ್ದನು. ಈ ಸಂಬಂಧ ಆಕೆ ಕಾಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಇದಾದ ಬಳಿಕ ಸಂಧಾನ ಮಾಡಿಕೊಂಡು ಪತಿಯ ಮನೆಯಲ್ಲಿಯೇ ವಾಸಿಸಲು ಆರಂಭಿಸಿದ್ದಳು. ಆದರೆ ಇಷ್ಟಾದರೂ ಪತಿಯ ಮನೆಯಲ್ಲಿ ಮಧ್ಯಾಹ್ನದ ನಿದ್ದೆ ಕಾಟ ಮಾತ್ರ ತಪ್ಪಿರಲಿಲ್ಲ.
ಈಕೆ ಗರ್ಭಿಣಿಯಾದ ಸಂದರ್ಭದಲ್ಲಿಯೂ ಪತಿ ಹಾಗೂ ಅತ್ತೆ ಯಾವುದೇ ರೀತಿಯ ಸಹಾಯ ಮಾಡದೇ ಆಕೆಯನ್ನು ತವರು ಮನೆಗೆ ಕಳುಹಿಸಿದ್ದರು. 2017ರ ಸೆಪ್ಟಂಬರ್ 18ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ ಕೋಪಗೊಂಡ ಪತಿ ನನ್ನ ಮೇಲೆ ಹಲ್ಲೆ ನಡೆಸಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.
ಇದಾದ ಬಳಿಕ ಈ ವರ್ಷದ ಫೆಬ್ರವರಿ 7ರಂದು ತನ್ನ ಪತಿ ತನ್ನನ್ನು ತೊರೆದಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ. ಸಮುದಾಯದ ಮುಖಂಡರ ಒತ್ತಾಯದ ನಂತರವೂ ಈಕೆಯನ್ನು ಮನೆಗೆ ಸೇರಿಸಲು ಪತಿ ನಿರಾಕರಿಸಿದ್ದ ಎನ್ನಲಾಗಿದೆ. ಇದಾದ ಬಳಿಕ ಮಾಧವಪುರ ಠಾಣೆಗೆ ತೆರಳಿದ ಮಹಿಳೆಯು ಪತಿ ಹಾಗೂ ಅತ್ತೆಯ ವಿರುದ್ಧ ಕೌಟುಂಬಿಕ ದೌರ್ಜನ್ಯದ ದೂರನ್ನು ದಾಖಲಿಸಿದ್ದಾಳೆ.