ಹಿಂದೂ ಕ್ಯಾಲೆಂಡರ್ ಪ್ರಕಾರ ಗಣೇಶ ಚತುರ್ಥಿಯು ಪ್ರತಿ ವರ್ಷ ಭಾದ್ರಪದ ತಿಂಗಳಲ್ಲಿ ಆಚರಿಸುವ 10 ದಿನಗಳ ಹಬ್ಬವಾಗಿದೆ. ಸಾಮಾನ್ಯವಾಗಿ ಎಲ್ಲರೂ ಗಣಪನನ್ನು ಹೂವಿನಿಂದ ಅಲಂಕರಿಸಿ, ವಿನಾಯಕನಿಗೆ ಇಷ್ಟ ಇರುವ ತಿಂಡಿಗಳನ್ನು ನೈವೇದ್ಯವನ್ನಾಗಿ ಇಡುತ್ತಾರೆ.
ಹಾಗೆಯೇ, ಗುಜರಾತ್ ಮೂಲದ ಮಹಿಳೆಯೊಬ್ಬರು ರಚಿಸಿದ ಗಣಪ ಹೇಗಿತ್ತು ಗೊತ್ತಾ..? ಗುಜರಾತ್ ನ ಮಹಿಳೆಯೊಬ್ಬರು ಉತ್ತಮ ಸಂದೇಶದೊಂದಿಗೆ ಗಣಪನ ಮೂರ್ತಿಯನ್ನು ಅಲಂಕರಿಸಿದ್ದಾರೆ.
ಹೌದು, ಆಹಾರ ವ್ಯರ್ಥದ ಬಗ್ಗೆ ಪ್ರಮುಖ ಸಂದೇಶ ನೀಡುವ ಸಲುವಾಗಿ, ಆಹಾರ ಪ್ಯಾಕೆಟ್ ಗಳಿಂದ ವಿಘ್ನ ನಿವಾರಕನನ್ನು ಅಲಂಕರಿಸಿದ್ದಾರೆ.
ರಾಧಿಕಾ ಸೋನಿ ಎಂಬಾಕೆಯೇ ಈ ವಿಭಿನ್ನ ಗಣಪನನ್ನು ರಚಿಸಿದಾಕೆ. 1008 ಬಿಸ್ಕತ್ತು ಪ್ಯಾಕೆಟ್‌ಗಳಿಂದ 5 ಅಡಿ ಎತ್ತರದ ಶಿವಲಿಂಗವಿದ್ದರೆ, 850 ರುದ್ರಾಕ್ಷಗಳನ್ನು ರಚಿಸಿದ್ದಾರೆ. ಮತ್ತು ಅದರ ಮಧ್ಯದಲ್ಲಿ ಗಣೇಶನ ಮೂರ್ತಿಯನ್ನು ಇರಿಸಲಾಗಿದೆ. ಇದರ ಎರಡೂ ಬದಿಗಳಲ್ಲಿ ಬರೋಡಾ ಮೂಲದ ಎರಡು ಸಂಸ್ಥೆಗಳ ಬ್ಯಾನರ್‌ಗಳಿವೆ. ಉಳಿದಿರುವ ಆಹಾರವನ್ನು ವ್ಯರ್ಥವಾಗದಂತೆ ಉಳಿಸಲು ಮತ್ತು ಅದನ್ನು ಬಡವರಿಗೆ ವಿತರಿಸಲು ಈ ಸಂಸ್ಥೆ ಕೆಲಸ ಮಾಡುತ್ತಿದೆ. ಗಣೇಶ ಮೂರ್ತಿಯನ್ನು ವಿಸರ್ಜಿಸಿದ ನಂತರ ಬಡ ಮಕ್ಕಳಿಗೆ ಬಿಸ್ಕೆಟ್ ಪ್ಯಾಕೆಟ್ ವಿತರಿಸಲಾಗುತ್ತದೆ ಎಂದು ಸೋನಿ ಹೇಳಿದ್ದಾರೆ.
ಸಮಾರಂಭ, ಕಾರ್ಯಕ್ರಮ ಮುಂತಾದೆಡೆ ಪ್ರಪಂಚದಾದ್ಯಂತ ಅದೆಷ್ಟೋ ಆಹಾರ ಪ್ರತಿದಿನ ವ್ಯರ್ಥವಾಗುತ್ತಿದೆ. ಆಹಾರವನ್ನು ವ್ಯರ್ಥ ಮಾಡದೆ ಅದನ್ನು ಹಸಿವಿನಲ್ಲಿದ್ದವರಿಗೆ ತಲುಪಿಸಿ ಅನ್ನೋದು ಸೋನಿ ಅವರ ಸಂದೇಶವಾಗಿದೆ.