ಗಾಂಧಿನಗರ: ಸಾಂವಿಧಾನಿಕವಾಗಿ ಕಾರ್ಯಸಾಧ್ಯವಾದರೆ ಪ್ರೇಮ ವಿವಾಹಗಳಲ್ಲಿ ಪೋಷಕರ ಅನುಮೋದನೆಯನ್ನು ಕಡ್ಡಾಯಗೊಳಿಸುವ ವ್ಯವಸ್ಥೆಯ ಸಾಧ್ಯತೆಯನ್ನು ತಮ್ಮ ಸರ್ಕಾರ ಅಧ್ಯಯನ ಮಾಡುತ್ತದೆ ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿದ್ದಾರೆ.
ಪ್ರೇಮವಿವಾಹದಲ್ಲಿ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಬೇಕು ಎಂಬ ಪಾಟಿದಾರ್ ಸಮುದಾಯದ ಕೆಲವು ವರ್ಗಗಳ ಬೇಡಿಕೆಗೆ ಸ್ಪಂದಿಸಿ ಅವರು ಹೀಗೆ ಪ್ರತಿಕ್ರಿಯೆ ನೀಡಿದರು.
ಪಾಟಿದಾರ್ ಸಮುದಾಯವನ್ನು ಪ್ರತಿನಿಧಿಸುವ ಸರ್ದಾರ್ ಪಟೇಲ್ ಗ್ರೂಪ್ ಭಾನುವಾರ ಮೆಹ್ಸಾನಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿಎಂ ಭೂಪೇಂದ್ರ ಪಟೇಲ್, ರಾಜ್ಯ ಆರೋಗ್ಯ ಸಚಿವ ಋಷಿಕೇಶ್ ಪಟೇಲ್ ಅವರು ಮದುವೆಯಾಗಲು ಓಡಿಹೋಗುವ ಹುಡುಗಿಯರ ಘಟನೆಗಳ ಬಗ್ಗೆ, ಪ್ರೇಮಿಗಳ ಮದುವೆಗೆ ಪೋಷಕರ ಒಪ್ಪಿಗೆ ಕಡ್ಡಾಯವಾಗಿಸುವ ಬಗ್ಗೆ ಅಧ್ಯಯನ ಮಾಡಲು ಸಮಿತಿ ರಚಿಸಬೇಕು ಎಂದಿದ್ದು, ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸಂವಿಧಾನವು ಅದನ್ನು ಬೆಂಬಲಿಸಿದರೆ, ನಂತರ ನಾವು ಈ ಬಗ್ಗೆ ಅಧ್ಯಯನವನ್ನು ನಡೆಸುತ್ತೇವೆ ಮತ್ತು ಇದಕ್ಕಾಗಿ ಉತ್ತಮ ಫಲಿತಾಂಶವನ್ನು ಪಡೆಯಲು ಪ್ರಯತ್ನಿಸುತ್ತೇವೆ ಎಂದು ಸಿಎಂ ಹೇಳಿದರು.
ವಿಧಾನಸಭೆಯಲ್ಲಿ ಸರ್ಕಾರ ಅಂತಹ ಯಾವುದೇ ಶಾಸನವನ್ನು ಮಂಡಿಸಿದರೆ ಅದನ್ನು ಬೆಂಬಲಿಸುವುದಾಗಿ ಪ್ರತಿಪಕ್ಷ ಕಾಂಗ್ರೆಸ್‌ನ ಶಾಸಕರೊಬ್ಬರು ಹೇಳಿದರು.
ಪ್ರೇಮ ವಿವಾಹದಲ್ಲಿ ಪೋಷಕರನ್ನು ನಿರ್ಲಕ್ಷಿಸುತ್ತಿರುವ ಈ ಸಂದರ್ಭದಲ್ಲಿ ಪ್ರೇಮ ವಿವಾಹಕ್ಕೆ ಸಂಬಂಧಿಸಿದಂತೆ ಸಂವಿಧಾನಾತ್ಮಕವಾಗಿ ಕಾರ್ಯಸಾಧ್ಯವಾದ ನಿರ್ದಿಷ್ಟ ವ್ಯವಸ್ಥೆ ರೂಪಿಸಲು ಸರಕಾರ ಚಿಂತನೆ ನಡೆಸಿದೆ ಎಂದು ಶಾಸಕ ಇಮ್ರಾನ್ ಖೇಡವಾಲ ಹೇಳಿದ್ದಾರೆ.