ರಾಜ್ ಕೋಟ್: ಪತ್ನಿ ಪರಾರಿಯಾಗಿದ್ದರಿಂದ ಆಕ್ರೋಶಗೊಂಡ ಪತಿರಾಯ ಆಕೆಯ ತವರು ಮನೆಯವರಿಗೆ ಚಿತ್ರಹಿಂಸೆ ನೀಡಿದ್ದಾನೆ.
ಮಹಿಳೆ ಪರಾರಿಯಾಗುವಲ್ಲಿ ತಮ್ಮ ಪಾತ್ರವಿಲ್ಲ ಎಂಬುದನ್ನು ಸಾಬೀತುಪಡಿಸಲು ಆಕೆಯ ತವರು ಮನೆಯವರನ್ನು ಕುದಿಯುವ ಎಣ್ಣೆಯಲ್ಲಿ ಕೈ ಹಾಕುವಂತೆ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿಯನ್ನು ಪೊಲೀಸರು ಬಂಧಿಸಿದರು.
ಗುಜರಾತ್ ನ ಕಛ್ ಜಿಲ್ಲೆಯ ರಾಪರ್ ತಾಲೂಕಿನ ಗೆಡಿ ಗ್ರಾಮದಲ್ಲಿ ಮಂಗಳವಾರ ಘಟನೆ ನಡೆದಿದೆ. ಆರೋಪಿತನ ದೇವಾಳ ಪತ್ನಿ 2 ತಿಂಗಳ ಹಿಂದೆ ಭಕ್ತವಾಡಿಯ ಗ್ರಾಮದಲ್ಲಿರುವ ತವರು ಮನೆಗೆ ಹೋಗುವುದಾಗಿ ತೆರಳಿದ್ದಳು. ಆದರೆ, ಆಕೆ ತವರಿಗೆ ಹೋಗದೇ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ.
ಪತ್ನಿ ಹೀರಾ ಕೋಲಿಯನ್ನು ವಿಚಾರಿಸಲು ತನೋ ಧೇಲಾ ತವರು ಮನೆಗೆ ಬಂದಾಗ ಇಲ್ಲಿಗೆ ಬಂದಿಲ್ಲವೆಂದು ತಿಳಿಸಿದ್ದಾರೆ. ಈ ವೇಳೆ ಪತ್ನಿಯ ತವರು ಮನೆಯವರೊಂದಿಗೆ ಜಗಳವಾಡಿದ್ದ ಧೇಲಾ ಊರಿಗೆ ಮರಳಿದ್ದಾನೆ.
ರಾಜಿ ಮಾಡಿಕೊಳ್ಳುವ ನೆಪದಲ್ಲಿ ಹೀರಾ ಕೋಲಿಯ ಕುಟುಂಬದವರನ್ನು ಕರೆಸಿಕೊಂಡಿದ್ದಾನೆ. ನಿಮ್ಮ ಮಗಳು ಪರಾರಿಯಾಗಲು ನೀವು ಸಹಾಯ ಮಾಡಿಲ್ಲವೆಂದಾದರೆ ಕುದಿಯುವ ಎಣ್ಣೆಯಲ್ಲಿ ಕೈ ಹಾಕಬೇಕೆಂದು ಬಲವಂತ ಮಾಡಿದ್ದಾರೆ. ಅನಿವಾರ್ಯವಾಗಿ ಮಹಿಳೆಯ ಕುಟುಂಬದವರು ಕುದಿಯುವ ಎಣ್ಣೆಯಲ್ಲಿ ಕೈ ಹಾಕಿದ್ದಾರೆ ಎಂದು ರಾಪರ್ ಪೊಲೀಸ್ ಇನ್ಸ್ ಪೆಕ್ಟರ್ ಪಿ.ಎನ್. ಜಿಂಜುವಾಡಿಯಾ ಹೇಳಿದ್ದಾರೆ.
ಕುದಿಯುವ ಎಣ್ಣೆಯಲ್ಲಿ ಕೈ ಹಾಕದಿದ್ದರೆ ಗ್ರಾಮಸ್ಥರಿಂದ ಹೊಡೆಸಲು ಧೇಲಾ ಪ್ಲಾನ್ ಮಾಡಿಕೊಂಡಿದ್ದ. ಈ ಭಯದಿಂದ ಕುದಿಯುವ ಎಣ್ಣೆಯಲ್ಲಿ ಕೈಹಾಕಿ ಮುಗ್ಧರು ಕೈಸುಟ್ಟುಕೊಂಡಿದ್ದಾರೆನ್ನಲಾಗಿದೆ.