ಅಹಮದಾಬಾದ್: ಭಾರಿ ಮಳೆ, ಪ್ರವಾಹದಿಂದಾಗಿ ಮೊಸಳೆಗಳು ಜನವಸತಿ ಪ್ರದೇಶಗಳಿಗೆ ನುಗ್ಗಿ ಆತಂಕವುಂಟುಮಾಡಿದ ಘಟನೆ ಗುಜರಾತ್ ನ ವಡೋದರಾದಲ್ಲಿ ನಡೆದಿದೆ.
ಗುಜರಾತ್ ನ ಹಲವೆಡೆ ಧಾರಾಕಾರ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿಯುಂಟಾಗಿದೆ. ವಡೋದರಾದಲ್ಲಿ ವಿಶ್ವಾಮಿತ್ರ ನದಿ ಉಕ್ಕಿ ಹರಿದ ಪರಿಣಾಮ ಮೊಸಳೆಗಳು ಜನವಸತಿ ಪ್ರದೇಶಗಳಿಗೆ ನುಗ್ಗಿವೆ. ಕಳೆದ ಮೂರು ದಿನಗಳಲ್ಲಿ ಜನವಸತಿ ಪ್ರದೇಶಗಳಿಂದ 24 ಮೊಸಳೆಗಳನ್ನು ರಕ್ಷಣೆ ಮಾಡಲಾಗಿದೆ.
ಅರಣ್ಯಾಧಿಕಾರಿ ಕರಣ್ ಸಿಂಹ ರಜಪೂತ್ ಈ ಬಗ್ಗೆ ಮಾಹಿತಿ ನೀಡಿದ್ದು, ವಿಶ್ವಾಮಿತ್ರ ನದಿ 400ಕ್ಕೂ ಹೆಚ್ಚು ಮೊಸಳೆಗಳ ಆವಾಸಸ್ಥಾನವಾಗಿದೆ. ಅಜ್ವಾ ಡ್ಯಾಂ ನಿಂದ ನೀರು ಬಿಡುಗಡೆಯಿಮ್ದಾಗಿ ನದಿಯಲ್ಲಿ ಪ್ರವಾಹ ಉಂಟಾಗಿ ಮೊಸಳೆಗಳು ಹೊರಬಂದಿವೆ. 24 ಮೊಸಳೆಗಳನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮೊಸಳೆಗಳು ಮಾತ್ರವಲ್ಲ, ಹಾವುಗಳು, 40 ಕೆಜಿಗೂ ಅಧಿಕ ತೂಕದ 5 ಬೃಹತ್ ಆಮೆಗಳು, ಪಾರ್ಕುಪೈನ್ ಸೇರಿದಂತೆ 75ಕ್ಕೂ ಹೆಚ್ಚು ಜಲಚರ, ಪ್ರಾಣಿಗಳು ರಕ್ಷಣೆ ಮಾಡಲಾಗಿದೆ.
ನಾವು ರಕ್ಷಿಸಿರುವ ಒಂದು ಮೊಸಳೆ 14 ಅಡಿ ಉದ್ದ, ಇನ್ನೊಂದು 11 ಅಡಿ ಉದ್ದ, ಮತ್ತೊಂದು ಮೊಸಳೆಗಳೆರಡು ಎರಡು ಅಡಿ ಉದ್ದದ ಮೊಸಳೆಗಳಾಗಿವೆ. ಒಟ್ಟು 24 ಮೊಸಳೆಗಳನ್ನು ರಕ್ಷಿಸಲಾಗಿದ್ದು, ಈವರೆಗೂ ಯಾವುದೇ ಮೊಸಳೆ-ಮಾನವ ಸಂಘರ್ಷಗಳು ನಡೆದಿಲ್ಲ ಎಂದು ತಿಳಿಸಿದ್ದಾರೆ.