ಗಾಂಧಿನಗರ: ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಸಿಹಿ ಸುದ್ದಿ ನೀಡಿದ್ದಾರೆ. ಗುಜರಾತ್ ನಲ್ಲಿ ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ಜಾರಿಗೆ ತಂದ ಆರೋಗ್ಯ ಯೋಜನೆಗಳ ಮಾದರಿಯಲ್ಲಿಯೇ ದೇಶಾದ್ಯಂತ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಗುಜರಾತ್ ನ ನವಸಾರಿ ಜಿಲ್ಲೆಯ ನೀರಾವರಿ ಯೋಜನೆ ಸೇರಿದಂತೆ ಸುಮಾರು 3050 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಿದ ಅವರು, ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾರಿಗೊಳಿಸಿದ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿ, ಗರ್ಭಿಣಿಯರಿಗಾಗಿ ಗುಜರಾತಿನಲ್ಲಿ ಜಾರಿಗೊಳಿಸಿದ ಚಿರಂಜೀವಿ ಯೋಜನೆಯಿಂದ 14 ಲಕ್ಷ ಹೆಣ್ಣುಮಕ್ಕಳಿಗೆ ಅನುಕೂಲವಾಗಿತ್ತು. ಚಿರಂಜೀವಿ ಮತ್ತು ಖಿಖಿಲಾಹತ್ ಯೋಜನೆಗಳನ್ನು ರಾಷ್ಟ್ರಮಟ್ಟದಲ್ಲಿ ಮಿಷನ್ ಇಂದ್ರಧನುಷ್ ಮತ್ತು ಮಾತೃ ವಂದನಾ ಯೋಜನೆ ಹೆಸರಿನಲ್ಲಿ ಜಾರಿಗೊಳಿಸಲಾಗಿದೆ. ಬಡವರಿಗೆ ಆರೋಗ್ಯ ಭದ್ರತೆ ಒದಗಿಸಲು ಆಯುಷ್ಮಾನ್ ಭಾರತ್ ಯೋಜನೆ ಜಾರಿಗೊಳಿಸಿದ್ದು, ಆರೈಕೆ ಕೇಂದ್ರ ಮತ್ತು ದೀನದಯಾಳ್ ಔಷಧಾಲಯಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದ್ದಾರೆ.