ವಡೋದರಾ: ಬುಡಕಟ್ಟು ಸಮುದಾಯಕ್ಕೆ ಸೇರಿದ 16 ವರ್ಷದ ಬಾಲಕಿಯನ್ನು ಅಪ್ರಾಪ್ತ ಬಾಲಕನೊಬ್ಬ ತನ್ನ ಇಬ್ಬರು ಸ್ನೇಹಿತರ ಸಹಾಯದಿಂದ ನಿಲ್ಲಿಸಿದ್ದ ಬಸ್ ಗೆ ಎಳೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿದ್ದು, ಆತನ ಇಬ್ಬರು ಸಹಚರರನ್ನು ಬಂಧಿಸುವ ಪ್ರಯತ್ನ ನಡೆಯುತ್ತಿದೆ.
ಪ್ರಕರಣದ ವಿವರಗಳ ಪ್ರಕಾರ, ಜನವರಿ 2 ರಂದು ಗುಜರಾತ್ನ ವಡೋದರಾದ ನ್ಯೂ ವಿಐಪಿ ರಸ್ತೆ ಪ್ರದೇಶದಲ್ಲಿ ಘಟನೆ ನಡೆದಿದೆ. ರಾತ್ರಿ 8 ಗಂಟೆಯ ಸುಮಾರಿಗೆ, ಬಂಧಿತ ಬಾಲಕ ಮತ್ತು ಅವನ ಇಬ್ಬರು ಸಹಚರರು ಹುಡುಗಿಯನ್ನು ರಸ್ತೆಯಲ್ಲಿ ನಿಲ್ಲಿಸಿದ್ದ ಐಷಾರಾಮಿ ಬಸ್ಗೆ ಎಳೆದೊಯ್ದರು. ಇದರ ಬೆನ್ನಲ್ಲೇ ಪ್ರಮುಖ ಆರೋಪಿಯ ಸಹಚರರು ಬಸ್ ನ ಬಾಗಿಲಿಗೆ ಬೀಗ ಜಡಿದಿದ್ದಾರೆ. ನಂತರ ಪ್ರಮುಖ ಆರೋಪಿ ಆದಿವಾಸಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧವನ್ನು ಯಾರಿಗೂ ಬಹಿರಂಗಪಡಿಸದಂತೆ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಪ್ರಾಪ್ತ ಬಾಲಕಿ ತನ್ನ ಸಂಬಂಧಿಕರಿಗೆ ಮಾಹಿತಿ ನೀಡಿದ್ದು, ನಂತರ ಹುಡುಗಿಯ ಚಿಕ್ಕಪ್ಪ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಪೊಲೀಸರು ಭಾರತೀಯ ದಂಡ ಸಂಹಿತೆ(IPC) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(POCSO) ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಅಪ್ರಾಪ್ತ ವಯಸ್ಕನಾಗಿರುವ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಆತನ ಸಹಚರರ ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದೆ.