ಸಂಬಂಧವನ್ನೂ ಮರೆತು ಭೀಕರವಾಗಿ ಹತ್ಯೆ ಮಾಡುವ ಪ್ರಕರಣಗಳು ಇತ್ತೀಚೆಗೆ ಜಾಸ್ತಿಯಾಗ್ತಿವೆ. ಗುಜರಾತ್ ನಲ್ಲಿ ಅಂಥದ್ದೊಂದು ಘಟನೆ ನಡೆದಿದ್ದು ಚೋಟಾ ಉದೇಪುರ್ನಲ್ಲಿ ಚಲಿಸುತ್ತಿದ್ದ ಬಸ್ನೊಳಗೆ ಪೊಲೀಸ್ ಅಧಿಕಾರಿ ತನ್ನ ಪತ್ನಿಯನ್ನು ಕತ್ತು ಸೀಳಿ ಕೊಲೆ ಮಾಡಿದ್ದಾನೆ.
ಕೊಲೆ ಮಾಡಿದ ಆತ ಪೊಲೀಸರು ಬರುವವರೆಗೂ ಶವದ ಪಕ್ಕದಲ್ಲೇ ಬಸ್ ನಲ್ಲಿ ಕುಳಿತಿದ್ದ. ಕೊಲೆ ಮಾಡಿದ ಆತನನ್ನು ಬಂಧಿಸಲಾಗಿದೆ. ಆರೋಪಿಯನ್ನು ಅಮೃತ್ ರಥ್ವಾ ಎಂದು ಗುರುತಿಸಲಾಗಿದ್ದು ಆತ ಸೂರತ್ ಜಿಲ್ಲೆಯಲ್ಲಿ ನೇಮಕವಾಗಿರುವ ಪೊಲೀಸ್ ಅಧಿಕಾರಿ ಎಂಬುದು ಅಚ್ಚರಿ. ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿಂದ ಆಕೆಯನ್ನು ಕೊಲೆ ಮಾಡಲು 200 ಕಿಲೋಮೀಟರ್ಗೂ ಹೆಚ್ಚು ದೂರ ಆತ ಪ್ರಯಾಣಿಸಿದ್ದಾನೆ.
ದುರಂತ ಸಂಭವಿಸಿದಾಗ ಪತ್ನಿ ಮಂಗುಬೆನ್ ಸರ್ಕಾರಿ ಜಿಎಸ್ಆರ್ಟಿಸಿಯಲ್ಲಿ ಕಂಡಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಫೋನ್ನಲ್ಲಿ ಪದೇ ಪದೇ ಜಗಳವಾಡಿದ ನಂತರ ಅಮೃತ್ ತನ್ನ ಹೆಂಡತಿಯನ್ನು ಕೊಲ್ಲಲು ನಿರ್ಧರಿಸಿ ಯೋಜನೆಯನ್ನು ರೂಪಿಸಿದ್ದನು.
ಮಂಗಳವಾರ ಆತ ತನ್ನ ಪತ್ನಿ ಕೆಲಸ ಮಾಡುವ ಭಿಖಾಪುರ ಗ್ರಾಮದಿಂದ ಬಸ್ ಹತ್ತಿದ್ದ ಆರೋಪಿ ಮಂಗುಬೆನ್ ಗೆ ಮೀಸಲಾಗಿದ್ದ ಕಂಡಕ್ಟರ್ ಸೀಟಿನಲ್ಲಿ ಕುಳಿತಿದ್ದನು. ಬಳಿಕ ತನ್ನ ಪತ್ನಿ ಮಂಗುಬೆನ್ ಕಡೆಗೆ ವೇಗವಾಗಿ ಬಂದು ಅವಳನ್ನು ಇರಿಯಲು ಪ್ರಾರಂಭಿಸಿ ಆಕೆಯ ಕತ್ತು ಸೀಳಿದ. ತೀವ್ರ ರಕ್ತಸ್ರಾವದಿಂದ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಕೊಲೆಯ ನಂತರ ಅಮೃತ್ ನನ್ನು ಬಂಧಿಸಲು ಪೊಲೀಸರು ಬರುವವರೆಗೂ ಆತ ಶವದ ಬಳಿ ಬಸ್ ಒಳಗೇ ಕುಳಿತಿದ್ದ. ಆತನ ಮೇಲೆ ಕೊಲೆ ಆರೋಪ ಹೊರಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.