ತಾನು ಪ್ರಧಾನ ಮಂತ್ರಿ ಕಾರ್ಯಾಲಯದ (ಪಿಎಂಓ) ಸಿಬ್ಬಂದಿ ಎಂದು ಹೇಳಿಕೊಂಡು ಕಾಶ್ಮೀರದಲ್ಲಿ ವಿಐಪಿ ಭದ್ರತೆ ಪಡೆದ ಗುಜರಾತ್ ಮೂಲದ ವ್ಯಕ್ತಿಯೊಬ್ಬನ್ನನ್ನು ಬಂಧಿಸಲಾಗಿದೆ.
ಆಪಾದಿತ ಕಿರಣ್ ಪಟೇಲ್ ತನ್ನನ್ನು ತಾನು ಪ್ರಧಾನ ಮಂತ್ರಿ ಕಾರ್ಯಾಲಯದ ಹೆಚ್ಚುವರಿ ನಿರ್ದೇಶಕ (ಸ್ಟ್ರಾಟಜಿ & ಕ್ಯಾಂಪೇನ್ಸ್) ಎಂದು ಹೇಳಿಕೊಂಡು ಭದ್ರತಾ ಸಿಬ್ಬಂದಿಗೆ ಹೀಗೆ ಮಾಡಿದ್ದಾನೆ. ಮಾರ್ಚ್ 3ರಂದು ಈತನನ್ನು ಬಂಧಿಸಲಾಗಿದ್ದು, ಶ್ರೀನಗರದಲ್ಲಿರುವ ಸ್ಥಳೀಯ ನ್ಯಾಯಾಲಯ ಈತನನ್ನು ಪೊಲೀಸ್ ರಿಮ್ಯಾಂಡ್‌ಗೆ ಮಾರ್ಚ್ 17ರವರೆಗೂ ಕಳುಹಿಸಿದೆ.
ಕಿರಣ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) 419, 420, 467, 468 ಮತ್ತು 471ರ ವಿಧಿಗಳ ಅಡಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಳ್ಳಲಾಗಿದೆ.
ಇಲ್ಲಿನ ಲಲಿತ್ ಗ್ರ‍್ಯಾಂಡ್ ಹೊಟೇಲ್‌ನಲ್ಲಿ ವಾಸ್ತವ್ಯವಿದ್ದ ಈತನ ಈ ನಡೆಯ ಕುರಿತು ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ನ ಸಿಐಡಿ ವಿಭಾಗ ಕಾಶ್ಮೀರ ಪೊಲೀಸ್‌ಗೆ ಮಾಹಿತಿ ನೀಡಿದೆ. ತನಿಖಾ ತಂಡವು ಈ ಕುರಿತು ತನಿಖೆ ನಡೆಸುತ್ತಿದ್ದು ಇನ್ನಷ್ಟು ಮಂದಿಯನ್ನು ತನಿಖೆಯ ಪ್ರಾಥಮಿಕ ಹಂತದಲ್ಲಿ ವಿಚಾರಣೆಯನ್ನೂ ಮಾಡಲಾಗಿದೆ.
“ಭಾರತ ಸರ್ಕಾರದ ಹಿರಿಯ ಅಧಿಕಾರಿ ಎಂದು ಕಿರಣ್ ಭಾಯ್ ತನ್ನನ್ನು ಹೇಳಿಕೊಂಡಿದ್ದ. ವಂಚನೆ ಹಾಗೂ ನಕಲುಗಳ ಮೇಲೆ ತನ್ನನ್ನು ನಂಬುವ ಜನರಿಗೆ ಈತ ಡ್ಯೂಪ್ ಮಾಡಿದ್ದು, ಅವರಿಂದ ಹಣ ಹಾಗು ಇನ್ನಿತರೆ ಲಾಭಗಳನ್ನು ಪಡೆಯಲು ತನಗೆ ಬೇಕಾದಂತೆ ಅವರನ್ನು ಕುಣಿಸುತ್ತಿದ್ದ,” ಎಂದು ಸುದ್ದಿ ವಾಹಿನಿಯೊಂದಕ್ಕೆ ಸಿಕ್ಕಿದ ಎಫ್‌ಐಆರ್ ಕಾಪಿಯಲ್ಲಿ ತಿಳಿಸಲಾಗಿದೆ.
ಸರ್ಕಾರೀ ಬುಲೆಟ್‌ಪ್ರೂಫ್ ವಾಹನದಲ್ಲಿ ಓಡಾಡುತ್ತಿದ್ದ ಈತನಿಗೆ ಭಾರೀ ಭದ್ರತೆ ನೀಡಿದ್ದನ್ನು ಅನೇಕ ವಿಡಿಯೋಗಳಲ್ಲಿ ಹಾಗೂ ಫೋಟೋಗಳಲ್ಲಿ ನೋಡಲಾಗಿತ್ತು ಎಂದು ಸುದ್ದಿ ವಾಹಿನಿಯೊಂದು ತಿಳಿಸಿದೆ.