ವಿಲಕ್ಷಣ ಘಟನೆಯೊಂದರಲ್ಲಿ, ವ್ಯಕ್ತಿಯೊಬ್ಬ ತನ್ನ ಸಂಬಂಧಿಕರ ಸಂಸ್ಥೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡಲು ಅನರ್ಹನಾಗಲು ತನ್ನ ಎಡಗೈಯ ನಾಲ್ಕು ಬೆರಳುಗಳನ್ನು ಹರಿತವಾದ ಚಾಕುವಿನಿಂದ ಕತ್ತರಿಸಿಕೊಂಡಿದ್ದಾನೆ ಎಂದು ಗುಜರಾತ್‌ನ ಸೂರತ್ ನಗರದ ಪೊಲೀಸರು ತಿಳಿಸಿದ್ದಾರೆ.
ಮಯೂರ್ ತಾರಾಪರಾ (32) ಈ ಹಿಂದೆ ರಸ್ತೆಯ ಪಕ್ಕದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದ ನಂತರ ತನ್ನ ಬೆರಳುಗಳು ಕಾಣೆಯಾದ ಬಗ್ಗೆ ಪೊಲೀಸರ ಮುಂದೆ ಕಥೆ ಕಟ್ಟಿದ್ದ, ಆದರೂ ಘಟನೆಗಳ ಸರಪಳಿಯ ತನಿಖೆಯಿಂದ ಈ ಹಾನಿ ಸ್ವಯಂ ಪ್ರೇರಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೂರತ್ ಕ್ರೈಂ ಬ್ರಾಂಚ್ ನೀಡಿರುವ ಹೇಳಿಕೆಯಲ್ಲಿ, ಮಯೂರ್ ತಾರಾಪರಾ ವರಾಚಾ ಮಿನಿ ಬಜಾರ್‌ನಲ್ಲಿರುವ ತಮ್ಮ ಸಂಸ್ಥೆ ಅನಭ್ ಜೆಮ್ಸ್‌ನಲ್ಲಿ ಇನ್ನು ಮುಂದೆ ಕೆಲಸ ಬಯಸುವುದಿಲ್ಲ ಎಂದು ತಮ್ಮ ಸಂಬಂಧಿಕರಿಗೆ ಹೇಳುವ ಧೈರ್ಯವಿಲ್ಲದ ಕಾರಣ ಈ ಕ್ರಮ ಕೈಗೊಂಡಿದ್ದಾರೆ ಎಂದಿದೆ.
ಸಂತ್ರಸ್ತ ಈ ಸಂಸ್ಥೆಯ ಅಕೌಂಟ್ಸ್ ವಿಭಾಗದಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದು, ಕೈಬೆರಳು ಇಲ್ಲದ ಕಾರಣ ತನ್ನನ್ನು ಕೆಲಸಕ್ಕೆ ಅನರ್ಹಗೊಳಿಸುತ್ತದೆ ಎಂಬ ಕಾರಣಕ್ಕೆ ಈ ರೀತಿ ಮಾಡಿಕೊಂಡಿದ್ದಾನೆ ಎಂದು ತಿಳಿಸಲಾಗಿದೆ.
ಇದಕ್ಕೂ ಮುನ್ನ ತಾರಾಪರಾ, ಡಿ.8ರಂದು ದ್ವಿಚಕ್ರವಾಹನದಲ್ಲಿ ಸ್ನೇಹಿತರೊಬ್ಬರ ಮನೆಗೆ ತೆರಳುತ್ತಿದ್ದಾಗ ಅಮ್ರೋಲಿಯ ವೇದಾಂತ ವೃತ್ತದ ಬಳಿ ರಿಂಗ್ ರೋಡ್‌ನಲ್ಲಿ ತಲೆ ಸುತ್ತು ಬಂದು ಬಿದ್ದಿದ್ದಾಗಿ ಪೊಲೀಸರಿಗೆ ತಿಳಿಸಿದ್ದರು. 10 ನಿಮಿಷದ ನಂತರ ಪ್ರಜ್ಞೆ ಬಂದಾಗ ಎಡಗೈಯ ನಾಲ್ಕು ಬೆರಳುಗಳು ತುಂಡಾಗಿದ್ದವು ಎಂದು ಹೇಳಿಕೊಂಡಿದ್ದರು.
ಮೊದಲಿಗೆ ಮಾಟಮಂತ್ರಕ್ಕಾಗಿ ಬೆರಳುಗಳನ್ನು ಕತ್ತರಿಸಿ ತೆಗೆದುಕೊಂಡು ಹೋಗಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಈ ಕುರಿತು ಅಮ್ರೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಗರದ ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿತ್ತು. ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ತಾಂತ್ರಿಕ ಕಣ್ಗಾವಲು ಹಾಗೂ ಮಾನವನ ಬುದ್ಧಿಮತ್ತೆಯನ್ನು ಬಳಸಿದ ನಂತರ ತಾರಾಪರಾ ಅವರ ಕರಾಮತ್ತು ಬಯಲಾಗಿದೆ.