ಗುಜರಾತ್ ನ ಗಿರ್ ಸೋಮನಾಥ್ ಜಿಲ್ಲೆಯಲ್ಲಿ ನಡೆದ ಚಿರತೆ ದಾಳಿಯಲ್ಲಿ 44 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅರಣ್ಯ ಅಧಿಕಾರಿಯೊಬ್ಬರು ಭಾನುವಾರ ದೃಢಪಡಿಸಿದ್ದಾರೆ.
ಗಿರ್ ಗಧಾಡಾ ತಾಲೂಕಿನಲ್ಲಿರುವ ಕೊಡಿಯಾ ಗ್ರಾಮದಲ್ಲಿ ಶನಿವಾರ ತಡರಾತ್ರಿ ಇಬ್ಬರು ಪುರುಷರು ತಮ್ಮ ಮನೆಗಳ ಹೊರಗೆ ಜಮೀನಿನ ಬಳಿ ಮಲಗಿದ್ದಾಗ ಈ ಘಟನೆ ಸಂಭವಿಸಿದೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ(ಎಸಿಎಫ್) ಕರಣ್ ಭಾಟಿಯಾ ಅವರ ಪ್ರಕಾರ, ಚಿರತೆ ಮೊದಲು ವಾಘಭಾಯಿ ವಾಘೇಲಾ ಮೇಲೆ ದಾಳಿ ಮಾಡಿ ಸ್ವಲ್ಪ ದೂರ ಎಳೆದುಕೊಂಡು ಹೋಗಿದೆ. ಸ್ಥಳೀಯರು ಕೂಗಾಡಿದಾಗ ಸ್ಥಳದಿಂದ ಓಡಿಹೋಗುವ ಮೊದಲು ವಾಘೇಲಾ ಅವರನ್ನು ಕೊಂದು ಹಾಕಿದೆ. ಸ್ವಲ್ಪ ಸಮಯದ ನಂತರ ಹಿಂತಿರುಗಿ ಬಂದ ಚಿರತೆ ಇನ್ನೊಬ್ಬ ವ್ಯಕ್ತಿಯ ಮೇಲೆ ದಾಳಿ ಮಾಡಿದ್ದು, ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿರತೆಯನ್ನು ಸೆರೆಹಿಡಿಯಲು ಅಧಿಕಾರಿಗಳು ಆ ಪ್ರದೇಶದಲ್ಲಿ 6 ಬೋನುಗಳನ್ನು ಇರಿಸಿದ್ದಾರೆ.
ಈ ವಾರದ ಆರಂಭದಲ್ಲಿ ಫರೇಡಾ ಗ್ರಾಮದಲ್ಲಿ 76 ವರ್ಷದ ದಿವಾಲಿಬೆನ್ ಜೋಗಿಯಾ ಎಂಬ ಮಹಿಳೆ ತನ್ನ ಮನೆಯ ವರಾಂಡಾದಲ್ಲಿ ಮಲಗಿದ್ದಾಗ ಚಿರತೆಯೊಂದು ಆಕೆಯನ್ನು ಕೊಂದ ಘಟನೆ ನಡೆದ ಬೆನ್ನಲ್ಲೇ ಈ ದಾಳಿ ನಡೆದಿದೆ. ಎರಡು ದಿನಗಳ ಹಿಂದೆಯಷ್ಟೇ ಅಮ್ರೇಲಿ ಜಿಲ್ಲೆಯಲ್ಲಿ 7 ವರ್ಷದ ಬಾಲಕಿಯನ್ನು ಚಿರತೆ ಕೊಂದು ಹಾಕಿತ್ತು.