ಮೂರು ದಶಕಗಳ ನಂತರ ಎಂಬಿಬಿಎಸ್ ಕೋರ್ಸ್‌ಗೆ ಮರು ಪ್ರವೇಶ ಕೋರಿ 50 ವರ್ಷದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಗುಜರಾತ್ ಹೈಕೋರ್ಟ್ ಬುಧವಾರ ಅವರಿಗೆ ಛೀಮಾರಿ ಹಾಕಿದೆ. ಜೊತೆಗೆ ಅರ್ಜಿದಾರರು ಅವರಿಗೆ ಇಷ್ಟಬಂದಂತೆ ನಡೆದುಕೊಂಡು ಜನಸಾಮಾನ್ಯರ ಜೀವನ ಹಾಗೂ ಜೀವದೊಂದಿಗೆ ಆಟವಾಡಲು ಕೋರ್ಟ್ ಅನುಮತಿ ನೀಡುವುದಿಲ್ಲಾ ಎಂದು ಎಚ್ಚರಿಕೆ ನೀಡಿದೆ.
1988ರಲ್ಲಿ ಬರೋಡಾ ಮೆಡಿಕಲ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್ ಪರೀಕ್ಷೆಗೆ ಹಾಜರಾಗಿ ನಂತರ ವೈಯಕ್ತಿಕ ಕಾರಣಗಳಿಂದ ಕೋರ್ಸ್ ಅನ್ನು ಅರ್ಧಕ್ಕೆ ಬಿಟ್ಟಿದ್ದ ಕಂದೀಪ್ ಜೋಶಿ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಭಾರ್ಗವ ಡಿ ಕರಿಯಾ ಅವರ ನ್ಯಾಯಪೀಠ ವಿಚಾರಣೆ ನಡೆಸುತ್ತಿದೆ.
ಪ್ರಸ್ತುತ ಬೇರೆ ವೃತ್ತಿಯಲ್ಲಿರುವ ಅರ್ಜಿದಾರರು 30 ವರ್ಷಗಳ ಹಿಂದೆ ತಾನು ಓದುತ್ತಿದ್ದ ಕಾಲೇಜಿನಲ್ಲಿಯೇ ಎಂಬಿಬಿಎಸ್ ಕೋರ್ಸ್ ಮುಗಿಸಿ ಪರೀಕ್ಷೆಗೆ ಹಾಜರಾಗಲು ಬಯಸಿದ್ದರು ಎಂದು ಜೋಶಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಅರ್ಜಿದಾರರು ಜೀವನದ ಈ ಹಂತದಲ್ಲಿ ಎಂಬಿಬಿಎಸ್ ಕೋರ್ಸ್ ಅನ್ನು ಏಕೆ ಮುಂದುವರಿಸಬೇಕು ಎಂಬುದನ್ನು ನ್ಯಾಯಾಲಯವು ತಿಳಿದುಕೊಳ್ಳಲು ಬಯಸಿದೆ.
ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಲಯವು, ಮರು ಪ್ರವೇಶಕ್ಕೆ ಅಂತಹ ಯಾವುದೇ ನಿಯಮವಿಲ್ಲ ಎಂದು ಭಾವಿಸೋಣ. ಆದರೂ, ನಿಮಗೆ ಬೇಕಾದುದನ್ನು ಮಾಡಲು ನಿಮಗೆ ಅನುಮತಿಸಲಾಗುವುದಿಲ್ಲ, ವಿಶೇಷವಾಗಿ ವೈದ್ಯ ವೃತ್ತಿ ಜನರ ಜೀವಕ್ಕೆ ಸಂಬಂಧಿಸಿದ್ದು. ಇಂತಹ ವಿಚಾರದಲ್ಲಿ ಅನುಮತಿ ನೀಡುವುದು ಸರಿಯಲ್ಲ ಎಂದು ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.
ಅರ್ಜಿದಾರರು ಪರೀಕ್ಷೆಗೆ ಹಾಜರಾಗುವ ಮೊದಲು ಮೂರನೇ ವರ್ಷದ ಕೋರ್ಸ್ ಓದಲು ಸಿದ್ಧರಿದ್ದಾರೆ ಎಂದು ಜೋಶಿ ಪರ ವಕೀಲರು ವಾದಿಸಿದಾಗ, ಅಂತಹ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.