ಸರ್ಕಾರಿ ವ್ಯವಸ್ಥೆ ಎಷ್ಟು ಬ್ರೇನ್‌ಲೆಸ್ ಎಂಬುದಕ್ಕೆ ಒಂದಿಲ್ಲೊಂದು ನಿದರ್ಶನಗಳು ಸಿಗುತ್ತಲೇ ಇವೆ. ಅಂಥ ಒಂದು ನಿದರ್ಶನ ಇಲ್ಲಿದೆ. ಮಾಧ್ಯಮ ಸಂಸ್ಥೆಯೊಂದು ಆರ್.ಟಿ.ಐ. ಮೂಲಕ ಸಲ್ಲಿಸಿದ ಅರ್ಜಿಗೆ ಉತ್ತರ ನೀಡುವುದಕ್ಕಾಗಿ ಪುಟಕ್ಕೆ ಎರಡು ರೂಪಾಯಿಯಂತೆ ನಾಲ್ಕು ರೂಪಾಯಿ ಪಾವತಿಸಬೇಕು ಎಂಬ ಸಂದೇಶ ರವಾನಿಸುವುದಕ್ಕೆ 25 ರೂಪಾಯಿಯನ್ನು ಗುಜರಾತ್ ಸರ್ಕಾರ ಖರ್ಚು ಮಾಡಿದೆ…!
ಗುಡ್ ಗರ್ವನೆನ್ಸ್‌ಗೆ “ಗುಜರಾತ್ ಮಾದರಿ” ಎಂದೇ ಬಿಂಬಿಸಲ್ಪಟ್ಟಿದೆ. ಆದರೆ, ಆರ್ಥಿಕ ವೆಚ್ಚದ ಕುರಿತು ಸರ್ಕಾರಕ್ಕೆ ಕಾಳಜಿ ಇಲ್ಲ ಎಂಬ ಭಾವನೆಯನ್ನು ಇದು ಮೂಡಿಸುತ್ತದೆ. ʼಇಂಡಿಯಾ ಟುಡೇʼ ಸಂಸ್ಥೆ ಮೇ 2ರಂದು ಗುಜರಾತ್ ಸರ್ಕಾರಕ್ಕೆ ಆರ್.ಟಿ.ಐ. ಅರ್ಜಿ ಸಲ್ಲಿಸಿತ್ತು. ಹಿಂದೆ ಮೊಟೇರಾ ಎಂದು ಕರೆಯಲ್ಪಡುತ್ತಿದ್ದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಉದ್ಘಾಟನೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ನೀಡಿದ ಆಹ್ವಾನದ ಪ್ರತಿ ಮತ್ತು ಅದಕ್ಕೆ ಅವರ ಸಮ್ಮತಿ ನೀಡಿದ ಪತ್ರದ ಪ್ರತಿಯನ್ನು ಅರ್ಜಿ ಮೂಲಕ ಕೋರಿತ್ತು.
ಈ ಅರ್ಜಿಗೆ ಗುಜರಾತ್ ಸರ್ಕಾರದ ಸಾಮಾನ್ಯ ಆಡಳಿತ ವಿಭಾಗವು ಮೇ 24ರಂದು ಪ್ರತಿಕ್ರಿಯಿಸಿದ್ದು, ಎರಡು ಪುಟಗಳ ಮಾಹಿತಿಗೆ ತಲಾ ಎರಡು ರೂಪಾಯಿಯಂತೆ 4 ರೂಪಾಯಿ ಜಮೆ ಮಾಡಲು ಇಮೇಲ್ ಮೂಲಕ ತಿಳಿಸಿತ್ತು. ನಗದು, ಡಿಡಿ, ಪೇ ಆರ್ಡರ್, ಪೋಸ್ಟಲ್ ಆರ್ಡರ್ ಅಥವಾ ಬಜೆಟ್ ಹೆಡ್ ಚಲನ್ ಮೂಲಕ ಇದನ್ನು ಪಾವತಿಸಬಹುದು ಎಂದೂ ಹೇಳಿತ್ತು. ಇದಕ್ಕೆ ಮಾರುತ್ತರವಾಗಿ ʼಇಂಡಿಯಾ ಟುಡೆʼ, ಆನ್‌ಲೈನ್ ಪಾವತಿಗೆ ಅವಕಾಶವಿದೆಯೇ ಎಂದು ಪ್ರಶ್ನಿಸಿತ್ತು. ಇದಕ್ಕೆ ಇನ್ನೂ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಅದು ವರದಿ ಮಾಡಿದೆ.
ಇದಾಗಿ ವಾರದ ಬಳಿಕ, ಗುಜರಾತ್ ಸರ್ಕಾರದ ಸಾಮಾನ್ಯ ಆಡಳಿತ ವಿಭಾಗ ಅಂಚೆ ಮೂಲಕವೂ ಇಮೇಲ್‌ನಲ್ಲಿದ್ದ ಮಾಹಿತಿಯನ್ನೇ ಕಳುಹಿಸಿತ್ತು. ಇದರ ಲಕೋಟೆಗೆ 25 ರೂಪಾಯಿ ಅಂಚೆ ಚೀಟಿಯನ್ನೂ ಅಂಟಿಸಲಾಗಿತ್ತು. 4 ರೂಪಾಯಿ ಪಾವತಿಸಿ ಎಂದು ತಿಳಿಸಲು 25 ರೂಪಾಯಿ ಅಂಚೆ ಚೀಟಿ, ಕವರ್, ಮುದ್ರಣ ವೆಚ್ಚ ಎಲ್ಲವನ್ನೂ ಸರ್ಕಾರ ಭರಿಸುತ್ತಿದೆ. ಡಿಜಿಟಲ್ ಯುಗದಲ್ಲಿ ಡಿಜಿಟಲ್ ಪಾವತಿಗೆ ಪ್ರಧಾನಿ ನರೇಂದ್ರ ಮೋದಿ ಒತ್ತು ನೀಡುತ್ತಿದ್ದರೂ, ಅವರ ತವರು ರಾಜ್ಯ ಸರ್ಕಾರ ಇನ್ನೂ ಅದನ್ನು ಜಾರಿಗೊಳಿಸದೇ ಇರುವುದು ವ್ಯವಸ್ಥೆಯ ವಿಪರ್ಯಾಸ ಎಂದು ʼಇಂಡಿಯಾ ಟುಡೇʼ ವರದಿ ಹೇಳಿದೆ.