ಅಹಮದಾಬಾದ್: ಪ್ರಿಯಕರನೊಂದಿಗೆ ಓಡಿಹೋಗಿದ್ದ ಬಾಲಕಿಯೊಬ್ಬಳಿಗೆ ಚಿತ್ರಹಿಂಸೆ ನೀಡಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಗುಜರಾತ್‌ನ ಪಟಾನ್ ಜಿಲ್ಲೆಯ ಹರಿಜ್ ಪಟ್ಟಣದಲ್ಲಿ ಕೆಲವು ದಿನಗಳ ಹಿಂದೆ ನಡೆದಿದೆ ಎನ್ನಲಾದ ಘಟನೆಯ ವಿಡಿಯೋ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ರಾಜ್ಯಾದ್ಯಂತ ಆಘಾತ ಅಲೆ ಎಬ್ಬಿಸಿದೆ. ಸ್ಥಳೀಯ ಪೊಲೀಸರು ಬಾಲಕಿಯ ಕುಟುಂಬದ ಕೆಲವು ಸದಸ್ಯರು ಸೇರಿದಂತೆ ಕನಿಷ್ಠ 17 ಜನರನ್ನು ಬಂಧಿಸಿದ್ದಾರೆ.
ವೈರಲ್ ವೀಡಿಯೊದಲ್ಲಿ ಕೆಲವರು ಹುಡುಗಿಯ ಮುಖಕ್ಕೆ ಮಸಿ ಬಳಿಯುತ್ತಾರೆ. ಇದರಿಂದ ಆಕೆಯ ಮುಖ, ದೇಹದ ಭಾಗ ಮಸಿಯಿಂದ ಕಪ್ಪಾಗಿದೆ. ಬಳಿಕ ಬಾಲಕಿ ಕೈ ಕಟ್ಟಿ ನೆಲದ ಮೇಲೆ ಕುಳಿತಿರುವುದು ಕಂಡು ಬಂದಿದೆ. ಒಬ್ಬ ವ್ಯಕ್ತಿ ಹುಡುಗಿಯ ಕೂದಲನ್ನು ಕತ್ತರಿಯಿಂದ ಕತ್ತರಿಸುತ್ತಿರುವುದನ್ನು ನೋಡಬಹುದು. ಈ ವೇಳೆ ಬಾಲಕಿ ಅಳುತ್ತಾ ರಕ್ಷಿಸುವಂತೆ ಬೇಡಿಕೊಳ್ಳುತ್ತಾಳೆ. ನಂತರ ಆಕೆಯ ಮುಖಕ್ಕೆ ಮಸಿ ಬಳಿದು ತಲೆ ಬೋಳಿಸಿ ಮೆರವಣಿಗೆ ಮಾಡಲಾಗಿದೆ.
ಬಾಲಕಿ ವಾಡಿ ಸಮುದಾಯಕ್ಕೆ ಸೇರಿದವಳಾಗಿದ್ದು, ಪ್ರಿಯಕರನೊಂದಿಗೆ ಓಡಿಹೋದ ನಂತರ ಅವಳನ್ನು ಕರೆತಂದು ಈ ರೀತಿಯಾಗಿ ಚಿತ್ರಹಿಂಸೆ ನೀಡಿ ‘ಶುದ್ಧೀಕರಿಸುವ’ ಆಚರಣೆ ನಡೆಸಲಾಗಿದೆ. ಘಟನೆಯಲ್ಲಿ ಆಕೆಯ ಕುಟುಂಬ ಸದಸ್ಯರು, ನೆರೆಹೊರೆಯವರು ಮತ್ತು ಆಕೆಯ ಸಮುದಾಯದ ಕೆಲವರು ಭಾಗಿಯಾಗಿದ್ದಾರೆ. ಅದೇ ದಿನ ಇನ್ನೊಬ್ಬ ವ್ಯಕ್ತಿಯೊಂದಿಗೆ ಮದುವೆ ಮಾಡಲಾಗಿದೆ.