ಪತ್ನಿಗಾಗಿ ತನ್ನ ಎಸ್ ಯು ವಿ ನಲ್ಲಿ ಕಾಯುತ್ತಿದ್ದ ಬಿಜೆಪಿ ಮುಖಂಡನ ಭೀಕರ ಹತ್ಯೆಯಾಗಿರೋ ಘಟನೆ ಗುಜರಾತ್‌ನ ವಲ್ಸಾದ್ ಜಿಲ್ಲೆಯ ವಾಪಿ ಪಟ್ಟಣದಲ್ಲಿ ನಡೆದಿದೆ. ಬೈಕ್ ನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೋಟರ್‌ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕೊಚರ್ವ ಗ್ರಾಮದ ಶೈಲೇಶ್ ಪಟೇಲ್ ಅವರ ಎಸ್‌ಯುವಿ ಬಳಿ ಬಂದು ಅವರ ಮೇಲೆ ಮೂರು-ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ ಎಂದು ಡುಂಗರಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶೈಲೇಶ್ ಪಟೇಲ್ ಅವರು ಬಿಜೆಪಿಯ ವಾಪಿ ತಾಲೂಕು ಘಟಕದ ಉಪಾಧ್ಯಕ್ಷರಾಗಿದ್ದರು.
ತಮ್ಮ ಪತ್ನಿಯೊಂದಿಗೆ ಪ್ರಾರ್ಥನೆ ಸಲ್ಲಿಸಲು ದೇವಸ್ಥಾನಕ್ಕೆ ಅವರು ತೆರಳಿದ್ದರು. ದೇವಸ್ಥಾನದಿಂದ ಪತ್ನಿ ವಾಪಸ್ ಬರುವವರೆಗೂ ಶೈಲೇಶ್ ಪಟೇಲ್ ಎಸ್ ಯುವಿನಲ್ಲಿ ಕೂತು ಕಾಯುತ್ತಿದ್ದರು. ಈ ವೇಳೆ ಎರಡು ಬೈಕ್ ನಲ್ಲಿ ಬಂದ
ನಾಲ್ವರು ದುಷ್ಕರ್ಮಿಗಳು ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆಂದು ವಾಪಿ ಬಿಜೆಪಿ ಘಟಕದ ಅಧ್ಯಕ್ಷ ಸುರೇಶ್ ಪಟೇಲ್ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.
ಬೆಳಗ್ಗೆ 7.30ರ ಸುಮಾರಿಗೆ ಪಟೇಲ್ ತನ್ನ ಪತ್ನಿಯೊಂದಿಗೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಪತ್ನಿಗಾಗಿ ವಾಹನದಲ್ಲಿ ಕಾಯುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಬ್ಧ ಕೇಳಿದ ಪಟೇಲ್ ಅವರ ಪತ್ನಿ ಸ್ಥಳಕ್ಕೆ ಧಾವಿಸಿ ನೋಡಿದಾಗ ಪತಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಸಹಾಯಕ್ಕಾಗಿ ಕೂಗಿದ್ದಾರೆ. ಅವರನ್ನು ವಾಪಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಲ್ಲಿ ವೈದ್ಯರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಸ್ಥಳೀಯ ಬಿಜೆಪಿ ನಾಯಕರು ಘಟನೆ ಬಗ್ಗೆ ಆಘಾತ ಮತ್ತು ದುಃಖ ವ್ಯಕ್ತಪಡಿಸಿದ್ದು ತನಿಖೆಗೆ ಒತ್ತಾಯಿಸಿದ್ದಾರೆ. ಆ ಪ್ರದೇಶದಲ್ಲಿನ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಶಂಕಿತರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಪ್ರದೇಶದಲ್ಲಿ ಕೆಲವು ರಸ್ತೆಗಳನ್ನು ನಿರ್ಬಂಧಿಸಲಾಗಿದ್ದು ದಾಳಿಕೋರರನ್ನು ಹುಡುಕಲು ತಂಡಗಳನ್ನು ರಚಿಸಲಾಗಿದೆ .