ಮುಂಬೈ: ಗುಜರಾತ್ ಎಟಿಎಸ್(ಭಯೋತ್ಪಾದನಾ ನಿಗ್ರಹ ದಳ) ಶನಿವಾರ ಮುಂಬೈನ ಅವರ ನಿವಾಸದಿಂದ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರನ್ನು ಬಂಧಿಸಿದೆ.
ಎನ್.ಜಿ.ಒ.ಗೆ ಸಂಬಂಧಿಸಿದ ಪ್ರಕರಣದಲ್ಲಿ ತೀಸ್ತಾ ಅವರನ್ನು ಬಂಧಿಸಲಾಗಿದೆ. ಸೆಟಲ್ವಾಡ್ ಅವರನ್ನು ಮುಂಬೈನ ಸಾಂತಾಕ್ರೂಜ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಗುಜರಾತ್ ಗಲಭೆ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ ಎತ್ತಿಹಿಡಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ವಿದೇಶಿ ಹಣ ಪಡೆದ ಆರೋಪದ ಪ್ರಕರಣದಲ್ಲಿ ಗುಜರಾತ್ ಎಟಿಎಸ್ ಇಂದು ಸೆಟಲ್ವಾಡ್ ಅವರನ್ನು ಬಂಧಿಸಿದೆ.
ಶುಕ್ರವಾರ, ಸುಪ್ರೀಂ ಕೋರ್ಟ್ ಸೆಟಲ್ವಾಡ್ ಅವರ ಹೆಸರನ್ನು ಉಲ್ಲೇಖಿಸಿ, ತೀಸ್ತಾ ಸೆಟಲ್ವಾಡ್ ಅವರ ಪೂರ್ವಾಪರಗಳನ್ನು ಪರಿಗಣಿಸಬೇಕಾಗಿದೆ. ಅವರು ಈ ವಿವಾದಕ್ಕೆ ಪ್ರತೀಕಾರವಾಗಿ ಕಿರುಕುಳ ನೀಡುತ್ತಿದ್ದಾರೆ. ನಿಜವಾದ ಬಲಿಪಶು ಝಾಕಿಯಾ ಜಾಫ್ರಿ ಅವರ ಭಾವನೆಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿತ್ತು.
ಗುಜರಾತ್ ಗಲಭೆಯಲ್ಲಿ ಹತ್ಯೆಗೀಡಾದ 68 ಮಂದಿಯ ಪೈಕಿ ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಝಕಿಯಾ ಜಾಫ್ರಿ ಅವರು ಸಲ್ಲಿಸಿದ ಅರ್ಜಿಯ ಮೇಲೆ ಸುಪ್ರೀಂ ತೀರ್ಪು ನೀಡಿದೆ. ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಎಸ್‌ಐಟಿ ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಜಾಕಿಯಾ ಜಾಫ್ರಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಸೆಟಲ್ವಾಡ್ ಸಹ ಅರ್ಜಿದಾರರಾಗಿದ್ದರು.
2002ರ ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಭೆಗಳ ಸಂತ್ರಸ್ತರ ಪರ ವಕಾಲತ್ತು ವಹಿಸಲು ಸಂಸ್ಥೆ ರಚಿಸಲಾಗಿದ್ದು, ವೈಯಕ್ತಿಕ ಲಾಭಕ್ಕಾಗಿ ತಪ್ಪು ಮಾಹಿತಿ ನೀಡಿದ್ದ ಆರೋಪದಡಿ ತೀಸ್ತಾ ಅವರನ್ನು ಬಂಧಿಸಲಾಗಿದೆ. ತೀಸ್ತಾ ಸೆಟಲ್ವಾಡ್ ಅವರ ವಿರುದ್ಧ ಸಾಕ್ಷಾಧಾರಗಳನ್ನು ತಿರುಚಿದ ಆರೋಪ ಕೂಡ ಕೇಳಿಬಂದಿದೆ. ಪತ್ರಕರ್ತೆ ಮತ್ತು ನಾಗರಿಕ ಹಕ್ಕುಗಳ ಹೋರಾಟಗಾರ್ತಿ, ಸಿಟಿಜನ್ಸ್ ಫಾರ್ ಜಸ್ಟೀಸ್ ಅಂಡ್ ಪೀಸ್ ಕಾರ್ಯದರ್ಶಿಯಾಗಿದ್ದಾರೆ.